ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಉತ್ತರ ಭಾರತದ ಗಂಗಾ ಆರತಿ ಮಾದರಿಯಲ್ಲೇ ಕಾವೇರಿ ನದಿಗೂ ಅಕ್ಟೋಬರ್.3ರ ನಾಳೆಯಿಂದ 7ರವರೆಗೆ ಐದು ದಿನಗಳ ಕಾಲ ಪ್ರಾಯೋಗಿಕವಾಗಿ ಆರತಿ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಶಾಸಕ ಎ.ಬಿ ರಮೇಶ ಬಂಡಿಸಿದ್ದೇಗೌಡ ಮಾಹಿತಿ ಹಂಚಿಕೊಂಡಿದ್ದು, ದಸರೆ ನಿಮಿತ್ತ ಪ್ರಾಯೋಗಿಕವಾಗಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ನಿಗದಿತ ಸ್ಥಳ ಗುರುತಿಸಿ, ನಿರಂತರವಾಗಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲಾಗುವುದು ಎಂದರು.
ಅಂದಹಾಗೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯ ಬಳಿ ಇರುವ ಕಾವೇರಿ ನದಿ ಸ್ನಾನಘಟ್ಟ ಸ್ಥಳವನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ, ಅದ್ವೈತ ವಾಚಸ್ಪತಿ ಡಾ ಭಾನುಪ್ರಕಾಶ್ ಶರ್ಮ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದರು. ಮುಂದಿನ ಸ್ಥಳ ಗುರುತಿಸವವರೆಗೂ ಅದೇ ಸ್ಥಳದಲ್ಲಿ ವಾರದಲ್ಲಿ ಎರಡು ದಿನ ಶ್ರೀರಂಗಪಟ್ಟಣ ದಸರಾ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಆ.3ರಿಂದ ಕಾವೇರಿ ಆರತಿ ನಡೆಸುವಂತೆ ಸೂಚಿಸಿದ್ದಾರೆ.
ಈಗಾಗಲೇ ಹರಿದ್ವಾರ ಹಾಗೂ ಕಾಶಿ ಮಾದರಿಯಲ್ಲೇ ಸೂರ್ಯೋದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲೇ ಕಾವೇರಿ ನದಿಗೂ ಆರತಿ ನಡೆಸುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ಎ ಬಿ ರಮೇಶ್ ಬಂಡಿಸಿದ್ದೇಗೌಡ, ಎಂಎಲ್ಸಿ ದಿನೇಶ್ ಗೂಳಿಗೌಡ ಸೇರಿದಂತೆ ಅನೇಕ ನಾಯಕರು ಹರಿದ್ವಾರ, ವಾರಣಾಸಿಗೆ ಭೇಟಿ ನೀಡಿ, ಪರಿಶೀಲಿಸಿತ್ತು.