ವಾರಣಾಸಿ: ಗಂಗಾರತಿ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವ ರಾಜ್ಯ ಸರಕಾರ ಈ ಸಂಬಂಧ ಪರಿಶೀಲನೆ ನಡೆಸಲು ಮತ್ತೊಂದು ನಿಯೋಗದ ಭೇಟಿ ಅಗತ್ಯವಿದ್ದು, ಶೀಘ್ರದಲ್ಲಿಯೇ ಮತ್ತೊಮ್ಮೆ ಅಧಿಕಾರಿಗಳು ಭೇಟಿ ನೀಡಲು ತೀರ್ಮಾನಿಸಿದ್ದಾರೆ.
ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ, ಮೈಸೂರು ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರು, ಕಾವೇರಿ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಮೂರು ದಿನಗಳ ಕಾಲ ಹರಿದ್ವಾರ ಹಾಗೂ ಕಾಶಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಈ ವೇಳೆ ಗಂಗಾರತಿ ಟ್ರಸ್‌್ಟ ಸದಸ್ಯರೊಂದಿಗೆ ಚರ್ಚಿಸಿದರು.
ಸರಣಿ ಸಭೆಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇಲ್ಲಿ ನಾವು ನೋಡಿರುವ ಅಂಶ ಹಾಗೂ ಕಾವೇರಿ ಆರತಿಗೆ ಆಗಬೇಕಿರುವ ಮೂಲಸೌಕರ್ಯದ ಬಗ್ಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ವರದಿ ಸಲ್ಲಿಸಲಾಗುವುದು. ಇದರೊಂದಿಗೆ ಕಾವೇರಿ ಆರತಿಗೆ ಇನ್ನಷ್ಟು ಅಧ್ಯಯನ ಅಗತ್ಯವಿರುವುದರಿಂದ ರಾಜ್ಯದ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದಸರಾಗೆ ಪ್ರಾಯೋಗಿಕ ಆರತಿ
ಆರಂಭದಲ್ಲಿ ಕಾವೇರಿ ಆರತಿಯನ್ನು ಮುಂಬರುವ ದಸರಾದಲ್ಲಿಯೇ ಪ್ರಾರಂಭಿಸಲು ಚರ್ಚಿಸಲಾಗಿತ್ತು. ಆದರೆ ಇದಕ್ಕೆ ಸಾಕಷ್ಟು ಪೂರ್ವ ತಯಾರಿಯ ಅಗತ್ಯವಿರುವುದರಿಂದ ಅಧ್ಯಯನ ಹಾಗೂ ಸಿದ್ಧತೆಯಾಗುವುದು ಅನಿವಾರ್ಯ. ಆದ್ದರಿಂದ ಈ ದಸರಾ ವೇಳೆಗೆ ಪ್ರಾಯೋಗಿಕವಾಗಿ ಕಾವೇರಿ ಆರತಿಯನ್ನು ಮಾಡಬಹುದು. ಬಳಿಕ ಧಾರ್ಮಿಕ ಹಾಗೂ ಮೂಲಸೌಕರ್ಯ ತಯಾರಿಗಳು ಪೂರ್ಣಗೊಂಡ ಬಳಿಕ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು. ನಿತ್ಯ ಆರತಿಯೋ ಅಥವಾ ವಾರಕ್ಕೆ ಎರಡು, ಮೂರು ದಿನಬವೋ ಎನ್ನುವ ಬಗ್ಗೆ ಸಿಎಂ, ಡಿಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಹರಿದ್ವಾರ, ಕಾಶಿಯಿಂದ ಪಂಡಿತರಿಗೆ ಆಹ್ವಾನ
ಇದೇ ಮೊದಲ ಬಾರಿಗೆ ಕಾವೇರಿ ಆರತಿ ಮಾಡುತ್ತಿರುವುದರಿಂದ ಇದಕ್ಕೆ ಬೇಕಾದ ತಯಾರಿ, ಕರ್ನಾಟಕದ ಅರ್ಚಕರಿಗೆ ತರಬೇತಿ ಸೇರಿದಂತೆ ಧಾರ್ಮಿಕ ವಿಧಿವಿಧಾನದ ಬಗ್ಗೆ ತರಬೇತಿಯನ್ನು ನೀಡಲು ಹರಿದ್ವಾರ ಹಾಗೂ ಕಾಶಿಯ ಪಂಡಿತರಿಗೆ ನಿಯೋಗ ಮನವಿ ಮಾಡಿದೆ. ಈ ಬಗ್ಗೆ ಸಿಎಂ, ಡಿಸಿಎಂ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಗಂಗಾರತಿಯ ವಿಶೇಷತೆಗಳೇನು?
ಹರಿದ್ವಾರ ಹಾಗೂ ಕಾಶಿಯಲ್ಲಿ ನಿತ್ಯ ಸೂರ್ಯೋದಯ ಹಾಗೂ ಸೂರ್ಯಸ್ತದ ಸಮಯದಲ್ಲಿ ನಡೆಯುವ ಗಂಗಾರತಿಗೆ ಐತಿಹಾಸಿಕ ಹಿನ್ನಲೆಯಿದೆ. ಕಾಶಿಯಲ್ಲಿ ಈ ಆರತಿ ಆರಂಭಗೊಂಡು 35 ವರ್ಷ ಕಳೆದಿದೆ. ಆದರೆ ಹರಿದ್ವಾರದ ಹರ್ ಕೀ ಪೌಡಿಯಲ್ಲಿ ನಡೆಯುವ ಗಂಗಾರತಿಗೆ ಅಧಿಕೃತ ದಾಖಲೆಗಳಲ್ಲಿ ಶತಮಾನದ ಇತಿಹಾಸವಿದೆ. ಈಗಲೂ ಪ್ರತಿನಿತ್ಯ ಹರಿದ್ವಾರದಲ್ಲಿರುವ ಮೂಲ ನಿವಾಸಿಗಳು ಗಂಗಾರತಿಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ. ಗಂಗಾರತಿಯ ವೇಳೆ ಕನಿಷ್ಠ 40ರಿಂದ 50 ಸಾವಿರ ಜನ ಭಾಗವಹಿಸುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ 10ರಿಂದ 20 ಲಕ್ಷ ಜನ ಸೇರುತ್ತಾರೆ. ಆರತಿಯನ್ನು 21 ಪಂಡಿತರು, 21 ಅಭಿಷೇಕವನ್ನು ನೆರವೇರಿಸುತ್ತಾರೆ.
ಪ್ರವಾಸಕ್ಕಿಂತ ಧಾರ್ಮಿಕ ಭಾವನೆ ಮುಖ್ಯ
ಕರ್ನಾಟಕ ನಿಯೋಗದೊಂದಿಗೆ ಸಭೆ ನಡೆಸಿದ ಹರಿದ್ವಾರ ಗಂಗಾ ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ, ಗಂಗಾ ಆರತಿಯ ರೀತಿಯಲ್ಲಿ ಕಾವೇರಿ ಆರತಿಯನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯ. ಆದರೆ. ಇದನ್ನು ಉದ್ಯಮದ ರೀತಿಯಾಗಿ ನೋಡುವ ಬದಲು ಧಾರ್ಮಿಕ ಭಾವನೆ ಮುಖ್ಯ. ಟ್ರಸ್‌್ಟ ಅಥವಾ ನಿಗಮವನ್ನು ಮಾಡಿದರೂ, ಅದರಲ್ಲಿ ಕಾನೂನು ಸುವ್ಯವಸ್ಥೆ, ಮೂಲಸೌಕರ್ಯದ ನಿರ್ವಹಣೆಯನ್ನು ಅಧಿಕಾರಿಗಳು ಮಾಡಿದರೂ, ಧಾರ್ಮಿಕ ವಿಧಿವಿಧಾನಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಧಾರ್ಮಿಕ ಮುಖ್ಯಸ್ಥರು ತಗೆದುಕೊಂಡರೆ ಸೂಕ್ತ ಎನ್ನುವ ಸಲಹೆಯನ್ನು ನೀಡಿದರು.
ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ನದಿಗೆ ಕಾವೇರಿ ಆರತಿ ಮಾಡುಬೇಕು ಎಂದು ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಕಾವೇರಿ ಆರತಿ ಕಾರ್ಯಕ್ರಮದ ಕುರಿತು ಸಮಿತಿ ರಚಿಸಲಾಗಿತ್ತು. ಇದೀಗ ಅಧ್ಯಯನ ಸಮಿತಿ ತಂಡ ಹರಿದ್ವಾರ ಮತ್ತು ವಾರಣಾಸಿಗೆ ಭೇಟಿ ನೀಡಿದೆ. ಇಂತಹದ್ದೊಂದು ಮಹತ್ವದ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ್ದ ದಿನೇಶ್ ಗೂಳಿಗೌಡ ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾವೇರಿ ಆರತಿಗೆಂದೇ ಸಾಧು ಸಂಗೀತ
ಹರಿದ್ವಾರ ಹಾಗೂ ಕಾಶಿಯಲ್ಲಿ ನಡೆಯುವ ಗಂಗಾರತಿ ವೇಳೆ ಮಂತ್ರಘೋಷದೊಂದಿಗೆ ಗಂಗಾದೇವಿಯ ಮೇಲೆ ರಚಿಸಿರುವ ಹಾಡುಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಈ ಎರಡು ಭಾಗದಲ್ಲಿಯೂ ಒಂದು ಗಂಟೆಗಳ ಕಾಲ ಆರತಿ ನಡೆಯುತ್ತದೆ. ಅದಕ್ಕೂ ಒಂದು ತಾಸಿಗೂ ಮೊದಲೇ ಜನರು ನದಿದಂಡೆಯಲ್ಲಿ ಆಸೀನರಾಗಿರುತ್ತಾರೆ. ಕರ್ನಾಟಕದಲ್ಲಿ ನಡೆಸುವ ಕಾವೇರಿ ಆರತಿಯೂ ಬಹುತೇಕ ಇದೇ ಮಾದರಿಯಲ್ಲಿ ನಡೆಯುವುದರಿಂದ ಸುಮಾರು ಎರಡು ಗಂಟೆಗಳ ಕಾಲ ಜನರನ್ನು `ಎಂಗೇಜ್’ ಮಾಡಬೇಕಾಗುತ್ತದೆ. ಆದ್ದರಿಂದ ಕಾವೇರಿ ಮಾತೆಯ ಇತಿಹಾಸ, ವೈಶಿಷ್ಟ್ಯ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿರುವ ಸಾಹಿತ್ಯವನ್ನು ರಚಿಸಿ, ಅದಕ್ಕೆ ಸಂಗೀತ ನಿರ್ದೇಶನವನ್ನು ಕರ್ನಾಟಕ ಸಿನಿಮಾ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ನೀಡಲಿದ್ದಾರೆ. ಈ ಕಾರಣಕ್ಕಾಗಿಯೇ ಸಾಧುಕೋಕಿಲ ಅವರೂ ನಿಯೋಗದಲ್ಲಿದ್ದರು.
ಯಾವ ಭಾಗದಲ್ಲಿ ಎನ್ನುವ ಬಗ್ಗೆಯೂ ಪರಿಶೀಲನೆ
ಕಾವೇರಿ ಆರತಿಯನ್ನು ನಡೆಸುವುದಕ್ಕೆ ಪೂರ್ವ ತಯಾರಿಗೂ ಮೊದಲು ಯಾವ ಭಾಗದಲ್ಲಿ ಆರತಿ ಕಟ್ಟೆಯನ್ನು ನಿರ್ಮಿಸಬೇಕು ಎನ್ನುವ ಚರ್ಚೆ ನಡೆಯುತ್ತಿದೆ. ಕಾವೇರಿ ಹರಿಯುವ ಬಹುತೇಕ ಭಾಗದಲ್ಲಿ ಸಮತಟ್ಟಾದ ಪ್ರದೇಶಗಳಿಲ್ಲ. ಆದ್ದರಿಂದ ಶ್ರೀರಂಗಪಟ್ಟಣದ ಗಂಜಾಂನ ನಿಮಿಷಾಂಭಾ ದೇವಾಲಯ, ಕೆಆರ್‌ಎಸ್ ಅಣೆಕಟ್ಟು ಅಥವಾ ಬಲಮುರಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ನಡೆಸಬಹುದೇ ಎನ್ನುವ ಚರ್ಚೆಗಳು ನಡೆದಿವೆ. ಎಲ್ಲಿಯೇ ಮಾಡಿದರೂ, ಜನ ಸೇರುವಂತೆ ಹಾಗೂ ಕನೆಕ್ಟಿವಿಟಿ ಕಲ್ಪಿಸುವುದನ್ನು ಗಮನಿಸಿ ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ತೀರ್ಮಾನಿಸಲಿ ಎನ್ನುವ ಚರ್ಚೆ ನಿಯೋಗದಲ್ಲಿ ಕೇಳಿಬಂದಿದೆ.
ಕಾವೇರಿ ಆರತಿಗೆ ಇರುವ ಸವಾಲುಗಳೇನು?
* ಸಮತಟ್ಟಾದ ಪ್ರದೇಶವನ್ನು ಗುರುತಿಸಬೇಕಿದೆ
* ಕಾವೇರಿ ಆರತಿ ಪ್ರತಿನಿತ್ಯ ನಡೆಸಿದರೆ, ಸ್ಥಳೀಯರು ಭಾಗವಹಿಸುವುದನ್ನು ಗಮನಿಸಬೇಕು
* ಆರತಿ ನಡೆಸುವ ಪ್ರದೇಶದಲ್ಲಿ 365 ದಿನವೂ ನೀರು ಹರಿಯುವುದೇ ಎನ್ನುವುದನ್ನು ಗಮನಿಸಬೇಕು
* ಆರತಿಯ ಪೂಜಾ ಕೈಂಕರ್ಯವನ್ನು ನಡೆಸಲು ಅಗತ್ಯ ತರಬೇತಿಯನ್ನು ಅರ್ಚಕರಿಗೆ ನೀಡಬೇಕು
* ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ, ಕಾನೂನು ಸುವ್ಯವಸ್ಥೆಗೂ ಸಮಸ್ಯೆಯಾಗದ ರೀತಿಯಲ್ಲಿ ನಿಗಮ ಅಥವಾ ಟ್ರಸ್‌್ಟ ಮಾಡುವುದು ಹೇಗೆ? ಮಾಡಿದರೂ, ಅದಕ್ಕೆ ರಾಜಕೀಯ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬೇಕು
ಈ ಬಗ್ಗೆ ಮಾತನಾಡಿದಂತ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು, ಕಾವೇರಿ ಆರತಿಯನ್ನು ಒಮ್ಮೆ ಆರಂಭಿಸಿದರೆ ಶತಮಾನಗಳವರೆಗೆ ನಡೆಯಬೇಕು ಎನ್ನುವುದು ನಮ್ಮ ಅಭಿಲಾಷೆ. ಆದ್ದರಿಂದ ಹರಿದ್ವಾರ ಹಾಗೂ ಕಾಶಿಯಲ್ಲಿ ನಡೆಯುವ ಗಂಗಾರತಿಯ ಬಗ್ಗೆ ಪರಿಶೀಲನೆ ನಡೆಸಿದ್ದು, ಸಲಹೆಗಳನ್ನು ಪಡೆದಿದ್ದೇವೆ. ಮುಂದಿನ ದಿನದಲ್ಲಿ ಅಧಿಕಾರಿಗಳು ಭೇಟಿ ನೀಡಿ ಇನ್ನಷ್ಟು ಮಾಹಿತಿ ಪಡೆದು ಬಳಿಕ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಹರಿದ್ವಾರ ಗಂಗಾ ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ ಮಾತನಾಡಿ, ಹರಿದ್ವಾರದಲ್ಲಿ ನಡೆಯುವ ಗಂಗಾರತಿಯ ರೀತಿಯಲ್ಲಿಯೇ ಕರ್ನಾಟಕದಲ್ಲಿ ಕಾವೇರಿ ಆರತಿ ಮಾಡಲು ಸರಕಾರ ಮುಂದಾಗಿರುವುದು ಶ್ಲಾಘನೀಯ. ಇದರಿಂದ ಧಾರ್ಮಿಕ ಆಚರಣೆಯೊಂದಿಗೆ ಜನರಲ್ಲಿ ಜಲದ ಬಗ್ಗೆ ಜಾಗೃತಿಯೂ ಮೂಡುತ್ತದೆ ಎಂದು ಹೇಳಿದರು.
ಕೆಆರ್ ಎಸ್ ನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ, ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಚಿವ ಸಂಪುಟ ಒಪ್ಪಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣರಾಜ ಸಾಗರ (ಕೆಆರ್ ಎಸ್)ದಲ್ಲಿ ವಿಶ್ವದರ್ಜೆಯ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ನದಿಗೆ ಕಾವೇರಿ ಆರತಿ ಮಾಡುವ ಕಾರ್ಯಕ್ರಮದ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಹೇಳಿದರು.
ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ವಿಶ್ವದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸಲಿದ್ದಾರೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಲಿದೆ ಎಂದರು.
ಇದೇ ಪ್ರಥಮವಾಗಿ ಬಹಳ ವೈಭವದಿಂದ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವಿನ ಕಾವೇರಿ ವಿವಾದಕ್ಕೆ ಕಾವೇರಿ ಮಾತೆ ಬಗೆಹರಿಸಲಿದ್ದಾಳೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
2 ದಿನ ನಿಯೋಗದಿಂದ ಅಧ್ಯಯನ ಪ್ರವಾಸ
ಕೃಷಿ ಸಚಿವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ, ಶಾಸಕರುಗಳಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ರವಿಕುಮಾರ್, ಕೆ.ಎಂ.ಉದಯ್, ದಿನೇಶ್ ಗೂಳಿಗೌಡ, ಮಧು ಮಾದೇಗೌಡ, ಹರೀಶ್ ಗೌಡ, ದರ್ಶನ್ ಧೃವನಾರಾಯಣ್, ಶಿವಲಿಂಗೇಗೌಡ, ಕೃಷ್ಣಮೂರ್ತಿ, ವಿಧಾನಪರಿಷತ್ ಮಾಜಿ ಸದಸ್ಯರಾದ ಅಪ್ಪಾಜಿಗೌಡ, ಮಂಡ್ಯ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಮಾಜಿ ಶಾಸಕರಾದ ರಾಜು, ಬಾಲಕೃಷ್ಣ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್, ಜಲಸಂಪನ್ಮೂಲ ಸಚಿವರ ಸಲಹೆಗಾರರಾದ ಜಯಪ್ರಕಾಶ್ ಸೇರಿದಂತೆ ಹಲವರು ಸದಸ್ಯರನ್ನೊಳಗೊಂಡ ನಿಯೋಗ ಸೆ.20ರ ಶುಕ್ರವಾರ ರಾತ್ರಿ ಹರಿದ್ವಾರದಲ್ಲಿ ಗಂಗಾ ನದಿಗೆ ಆರತಿ ಮಾಡುವುದನ್ನು ವೀಕ್ಷಣೆ ಮಾಡಿತು. ಸೆ.21ರ ಶನಿವಾರ ವಾರಣಾಸಿಗೆ ತೆರಳಿ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ಘಾಟ್ ಆದ ದಶಾಸ್ವಮೇಧ ಘಾಟ್ ನಲ್ಲಿ ಗಂಗಾ ಆರತಿಯನ್ನು ವೀಕ್ಷಣೆ ಮಾಡಿತು. ಸೆ. 22ರ ಭಾನುವಾರ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಘಾಟ್ ನಲ್ಲಿ ಸಂಚರಿಸಿ, ಅಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿತು.
‘ಮಕ್ಕಳ ಅಶ್ಲೀಲ ಚಿತ್ರ’ ವೀಕ್ಷಣೆ ಅಪರಾಧವೇ.? ನಾಳೆ ‘ಸುಪ್ರೀಂ ಕೋರ್ಟ್’ನಿಂದ ಐತಿಹಾಸಿಕ ತೀರ್ಪು ಪ್ರಕಟ
ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 TMC ನೀರು ಉಳಿಸಿದ ತಜ್ಞರಿಗೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ಧರಾಮಯ್ಯ
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast