ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಸರ್ವರ್ ಸಮಸ್ಯೆ ನಡುವೆಯೂ ಶಿಕ್ಷಕರು ಜಾತಿಗಣತಿ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಹಾಗಾದ್ರೇ ಈವರೆಗೆ ಎಷ್ಟು ಮನೆಗಳ ಸರ್ವೆ ಮಾಡಲಾಗಿದೆ ಎಂಬ ಬಗ್ಗೆ ಅಂಕಿ ಅಂಶ ಮುಂದಿದೆ ಓದಿ.
ನೆಟ್ವರ್ಕ್ ಸಮಸ್ಯೆಗಳ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂರನೇ ದಿನವಾದ ಗುರುವಾರ ರಾಜ್ಯದಲ್ಲಿ 53,908 ಕುಟುಂಬಗಳ 1,81,051 ಜನರ ಸಮೀಕ್ಷೆ ಮಾಡಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಸೆಪ್ಟೆಂಬರ್.22ರಿಂದ ನಡೆಸಲಾಗುತ್ತಿದೆ. ಸಮೀಕ್ಷೆಗೆ 1.60 ಲಕ್ಷ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.
ಜಾತಿಗಣತಿಯ ಸಮೀಕ್ಷೆಗೆ ಸರ್ವರ್ ಸಮಸ್ಯೆ ಎದುರಾಗಿದೆ. ರಾಜ್ಯದ ವಿವಿಧೆಡೆ ನೀರಿನ ಟ್ಯಾಂಕ್, ಮರ ಏರಿಯೆಲ್ಲ ಶಿಕ್ಷಕರು ಸಮೀಕ್ಷೆ ನಡೆಸುತ್ತಿರುವುದು ವರದಿಯಾಗಿದೆ. ಸರ್ವರ್ ಸಮಸ್ಯೆ ಕಾರಣಕ್ಕಾಗಿ ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಿಕೆ ಮಾಡುವಂತೆಯೂ ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.