ವಾಷಿಂಗ್ಟನ್: ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮತ್ತೆ ಬಂದ್ ಮಾಡಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಶ್ವೇತಭವನದ ಅತ್ಯುನ್ನತ ಮಟ್ಟದ ‘ಸಿಚುಯೇಶನ್ ರೂಮ್’ (Situation Room) ನಲ್ಲಿ ತುರ್ತು ಸಭೆ ನಡೆಸಿದ ಅವರು, ಇರಾನ್ನ ಬೆದರಿಕೆಗಳಿಗೆ ಅಮೆರಿಕ ಮಣಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕೆಲವೇ ಗಂಟೆಗಳ ಹಿಂದೆ ಜಲಸಂಧಿಯನ್ನು ಮುಕ್ತಗೊಳಿಸುವುದಾಗಿ ಹೇಳಿದ್ದ ಇರಾನ್, ಈಗ ತನ್ನ ನಿಲುವು ಬದಲಿಸಿ ಮತ್ತೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿದೆ. ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ ತೆರವುಗೊಳಿಸದ ಹೊರತು ಹಾರ್ಮುಜ್ ಮೇಲೆ ಹತೋಟಿ ಬಿಡುವುದಿಲ್ಲ ಎಂದು ಇರಾನ್ ಘೋಷಿಸಿದೆ.
“ಇರಾನ್ ನಮ್ಮನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಅವರು ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ನಾವು ಎಲ್ಲಾ ರೀತಿಯ ಆಯ್ಕೆಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ,” ಎಂದು ಟ್ರಂಪ್ ಗುಡುಗಿದ್ದಾರೆ. ಅಲ್ಲದೆ, ಇರಾನ್ನ ಈ ವರ್ತನೆಯನ್ನು ‘ಕ್ಯೂಟ್’ (ಲೇವಡಿ ರೂಪದಲ್ಲಿ) ಎಂದು ಕರೆದಿದ್ದಾರೆ.
ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಟ್ರಂಪ್ ಸಮಾಲೋಚನೆ ನಡೆಸಿದ್ದು, ಮುಂದಿನ ಸಂಭವನೀಯ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಭೆಯು ಗಲ್ಫ್ ಪ್ರಾಂತ್ಯದಲ್ಲಿ ಅಮೆರಿಕದ ಮುಂದಿನ ಮಿಲಿಟರಿ ನಡೆಯನ್ನು ನಿರ್ಧರಿಸಲಿದೆ.
ಎರಡು ವಾರಗಳ ಕದನ ವಿರಾಮವು ಮುಕ್ತಾಯದ ಹಂತಕ್ಕೆ ಬಂದಿದ್ದು, ಉಭಯ ದೇಶಗಳ ನಡುವಿನ ಮಾತುಕತೆಗಳು ಹಳಿ ತಪ್ಪುತ್ತಿರುವುದು ಮತ್ತೊಂದು ಯುದ್ಧದ ಮುನ್ಸೂಚನೆಯನ್ನು ನೀಡಿದೆ.







