ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಅಂತಹ ರಸಗೊಬ್ಬರ ಅಂಗಡಿಗಳ ಪರವಾನಗಿ ರದ್ದು ಪಡಿಸುವುದರ ಜೊತೆಗೆ ಕ್ರಿಮೀನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ಎಸ್. ತಂಗಡಗಿ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯ ರಸಗೊಬ್ಬರ ಮಾರಾಟಗಾರರಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ರಸಗೊಬ್ಬರ ಮಾರಾಟಗಾರರು ಅನಧೀಕೃತವಾಗಿ ರಸಗೊಬ್ಬರವನ್ನು ಸ್ಟಾಕ್ ಇಟ್ಟುಕೊಂಡು ಮಾರಾಟ ಮಾಡಭಾರದು ಮತ್ತು ನಿಗದಿತ ದರಕ್ಕಿಂತ ಒಂದೇ ಒಂದು ರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ರಸಗೊಬ್ಬರ ಅಂಗಡಿಗಳ ಮುಂದೆ ರೈತರಿಗೆ ಕ್ಯೂ ನಿಲ್ಲಿಸಿ ಡಿಮಾಂಡ್ ಮಾಡುವ ಕೆಲಸವನ್ನು ಮಾಡಭಾರದು ಎಂದು ಹೇಳಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಸುಸೂತ್ರವಾಗಿ ವಿತರಣೆಯಾಗುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿಗಾ ವಹಿಸಲಿದ್ದು ತಾಲ್ಲೂಕು ಮಟ್ಟದಲ್ಲಿ ತಹಶಿಲ್ದಾರರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸೊಸೈಟಿಗಳ ಜೊತೆಗೆ ಎಲ್ಲಾ ಡೀಲರಗಳಿಗೆ ರಸಗೊಬ್ಬರ ಕೊಡಲು ಹೇಳಲಾಗಿದೆ. ರೈತರು ಯಾರು ಆತಂಕ ಪಡಬೇಕಾಗಿಲ್ಲ. ರೈತರು ತಮ್ಮ ಅವಶ್ಯಕತೆ ತಕ್ಕಂತೆ ರಸಗೊಬ್ಬರ ತೆಗೆದುಕೊಂಡು ಹೋಗಬೇಕು. ಯಾರು ಭಯಬೀತರಾಗಿ ಮುಂದೆ ಗೊಬ್ಬರ ಸಿಗುತ್ತದೆ ಇಲ್ಲ ಎಂದು ಗಾಬರಿಯಾಗಬೇಕಿಲ್ಲ. ಈ ತಿಂಗಳ 31 ತಾರೀಖಿಗೆ 800 ಮೆಟ್ರಿಕ್ ಟನ್ ಹಾಗೂ ಆಗಸ್ಟ್ 1 ಮತ್ತು 3ನೇ ತಾರೀಖಿಗೆ ತಲಾ 1200 ಮೇಟ್ರಿಕ್ ಟನ್ ರಸಗೊಬ್ಬರ ಜಿಲ್ಲೆಗೆ ಬರಲಿದೆ. ಹಾಗಾಗಿ ಈ ಮಾಹಿತಿಯನ್ನು ರೈತರಿಗೆ ತಿಳಿಸಬೇಕೆಂದು ರಸಗೊಬ್ಬರ ವಿತರಕರಿಗೆ ಸಚಿವರು ಹೇಳಿದರು.
ಜಿಲ್ಲೆಯಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಸಹಿಸುವುದಿಲ್ಲ. ಈಗಾಗಲೇ ಒಂದು ನಕಲಿ ಗೊಬ್ಬರ ಮಾರಾಟ ಪ್ಯಾಕ್ಟರಿ ಸೀಜ್ ಮಾಡಲಾಗಿದೆ. ರೈತರಿಗೆ ಹಾನಿಯಾದರೆ ನಾವು ಸಹಿಸಿಕೊಳ್ಳುವುದಿಲ್ಲ. ರೈತರು ಯಾರು ಜಿಲ್ಲೆಯಲ್ಲಿ ಆತಂಕ ಪಡಬೇಕಿಲ್ಲ. ಆಗಸ್ಟ್ ತಿಂಗಳಲ್ಲಿ ನಮಗೆ ಸಾಕಾಗುವಷ್ಟು ರಸಗೊಬ್ಬರ ಜಿಲ್ಲೆಗೆ ಬರಲಿದೆ. ರೈತರಿಗೆ ಸರಿಯಾಗಿ ರಸಗೊಬ್ಬರ ವಿತರಣೆಯಾಗುತ್ತಿರುವ ಮಾಹಿತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಆಗಾಗ ನನಗೆ ನೀಡಬೇಕೆಂದು ಹೇಳಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯಕಾಯನಿರ್ವಾಹಕ ಅಧಿಕಾರಿ ವರ್ಣಿತ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಕೃಷಿ ಇಲಾಖೆ ಉಪ ನಿರ್ದೇಶಕ ಎಲ್.ಸಿದ್ದೇಶ್ ಇತರೆ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಕೃಷಿ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.