ವಾಷಿಂಗ್ಟನ್: ಮಾನವನು ಭೂಮಿಯನ್ನು ಮೀರಿ ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ವಸತಿ ಸ್ಥಾಪಿಸುವ ಕನಸು ಕಾಣುತ್ತಿದ್ದಾನೆ. ಆದರೆ, “ಬಾಹ್ಯಾಕಾಶದಲ್ಲಿ ಮಗು ಹೆರಲು ಸಾಧ್ಯವೇ?” ಎಂಬ ದಶಕಗಳ ಕಾಲದ ಪ್ರಶ್ನೆಗೆ ಈಗ ವಿಜ್ಞಾನಿಗಳು ಮಹತ್ವದ ಉತ್ತರ ಕಂಡುಕೊಂಡಿದ್ದಾರೆ. ಇತ್ತೀಚಿನ ಹೊಸ ಅಧ್ಯಯನವೊಂದು ಶೂನ್ಯ ಗುರುತ್ವಾಕರ್ಷಣೆಯಲ್ಲಿ (Zero Gravity) ಸಂತಾನೋತ್ಪತ್ತಿಯ ಸಾಧ್ಯತೆಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.
ವಿಜ್ಞಾನಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ನಡೆಸಿದ ಪ್ರಯೋಗಗಳಲ್ಲಿ, ಸಸ್ತನಿಗಳ ಭ್ರೂಣಗಳು ಶೂನ್ಯ ಗುರುತ್ವಾಕರ್ಷಣೆಯಲ್ಲೂ ಆರಂಭಿಕ ಹಂತದ ಬೆಳವಣಿಗೆಯನ್ನು ಹೊಂದಬಲ್ಲವು ಎಂಬುದು ತಿಳಿದುಬಂದಿದೆ.
ಬಾಹ್ಯಾಕಾಶದಲ್ಲಿ ಭೂಮಿಗಿಂತ ಹೆಚ್ಚಿನ ಪ್ರಮಾಣದ ಕಾಸ್ಮಿಕ್ ವಿಕಿರಣಗಳಿರುತ್ತವೆ (Cosmic Radiation). ಇದು ಡಿಎನ್ಎ ಮೇಲೆ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇತ್ತೀಚಿನ ಪರೀಕ್ಷೆಗಳಲ್ಲಿ ಭ್ರೂಣದ ಕೋಶಗಳು ಸಾಮಾನ್ಯವಾಗಿಯೇ ಬೆಳೆದಿರುವುದು ಕಂಡುಬಂದಿದೆ.
ಜಪಾನ್ನ ವಿಜ್ಞಾನಿಗಳ ತಂಡವು ಹೆಪ್ಪುಗಟ್ಟಿದ ಎಲಿಯ ಭ್ರೂಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅಲ್ಲಿ ಅವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಭ್ರೂಣಗಳಲ್ಲಿ ಯಾವುದೇ ರೀತಿಯ ತಳಿ ದೋಷಗಳು ಕಂಡುಬಂದಿಲ್ಲ ಎಂಬುದು ವಿಶೇಷ.








