ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು ಬೆಳಿಗ್ಗೆ ಸರ್ದಾರ ವಲಭಭಾಯಿ ಪಟೇಲ್ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ನಂತರ ಡಿಎಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರಾಭಿವೃದ್ದಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಭಾಗದ ಜನರ ಬಹು ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಕಲಬುರಗಿ ಯಲ್ಲಿ ಸೆಪ್ಟೆಂಬರ್ 17 ರಂದು ಸಚಿವ ಸಂಪುಟ ಸಭೆ ನಡೆಸಲಾಗುತ್ತಿದೆ. ಈ ಭಾಗದ ಇಲಾಖಾವಾರು ಸಮಗ್ರ ಅಭಿವೃದ್ದಿಯ ಕುರಿತು ಚರ್ಚಿಸಿ ನೀಲಿ ನಕ್ಷೆ ತಯಾರಿಸುವ ಬಗ್ಗೆಯೂ ಕೂಡಾ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ನಮ್ಮ ಭಾಗದ ಎಲ್ಲ ಶಾಸಕರ ಬೇಡಿಕೆಯ ಪಟ್ಟಿ ನೋಡಿದರೆ ರಾಜ್ಯದ ಬಜೆಟ್ ಗಾತ್ರದಷ್ಟಾಗುತ್ತದೆ. ಆದರೆ ಮ್ಯಾಕ್ರೋ ಯೋಜನೆಯಡಿಯಲ್ಲಿ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕೊನೆ ಪಕ್ಷ ಈ ಸಲ ಯೋಜನೆಗಳ ಬಗ್ಗೆ ಚರ್ಚಿಸಿದರೆ ಮುಂದಿನ ವರ್ಷವಾದರೂ ಯೋಜನೆ ಬರುತ್ತವೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದ ಸಚಿವರು ತಮ್ಮ ಸರ್ಕಾರ ಬಂದ ಮೇಲೆ ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ನಮ್ಮ ಇಲಾಖೆಯಲ್ಲಿಯೇ 800 ಇಂಜಿನಿಯರ್ ಗಳ ಹುದ್ದೆ ಭರ್ತಿ ಮಾಡಲಾಗಿದೆ ಎಂದರು.
ಮುಂದಿನ ಎರಡು ವರ್ಷದಲ್ಲಿ ಕಲ್ಯಾಣ ಪಥ ಯೋಜನೆಯಡಿಯಲ್ಲಿ ನಮ್ಮ ಭಾಗದ ರಸ್ತೆಗಳ ರಿಪೇರಿ ಹಾಗೂ ಉನ್ನತಿಕರಣ ಮಾಡಲಾಗುವುದು ಎಂದು ಹೇಳಿದ ಖರ್ಗೆ, ಕಲಬುರಗಿ ಹಾಗೂ ಬೀದರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಭಾಗದ ಅಭಿವೃದ್ದಿ ವಿಚಾರದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಒಟ್ಟು 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಹಂತಹಂತವಾಗಿ ತುಂಬಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಹೇಳಿದರು.
ಮುನಿರತ್ನ ವಿರುದ್ಧ ಪ್ರತಿಭಟನೆ ಮಾಡಲಿ
ಪ್ರತಿಭಟನೆ ಮಾಡುವುದಿದ್ದರೆ ಶಾಸಕ ಮುನಿರತ್ನ ವಿರುದ್ದ ಮಾಡಲಿ ಅದಕ್ಕೂ ಮೊದಲು ಶಿಕ್ಷಣ ಸಂಸ್ಥೆಗಾಗಿ ಪಡೆದ ಜಾಗದಲ್ಲಿ ಬಿರಿಯಾನಿ ಹೊಟೇಲ್ ನಡೆಸುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಲಿ. ಅದು ಬಿಟ್ಟು ಇಲ್ಲಿ ಬಂದು ಡ್ರಾಮಾ ಮಾಡಬಾರದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಫಾಸ್ಟ್ ಟ್ರಾಕ್ ಕೋರ್ಟ್ ಆಗಬೇಕಿರುವುದು ಬಿಜೆಪಿ ಹಗರಣದ ಬಗ್ಗೆ ವಿಚಾರಣೆ ನಡೆಸಲು ಹೊರತು ದರ್ಶನ್ ಕೇಸ್ ಬಗ್ಗೆ ವಿಚಾರಣೆ ನಡೆಸಲು ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾಗಮಂಗಲ ಗಲಭೆ ವಿಚಾರ, ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅದರ ಹಿಂದೆ ಯಾರೇ ಇದ್ದರೂ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಈಗಾಗಲೇ ಹೇಳಿದ್ದಾರೆ ಎಂದು ಖರ್ಗೆ, ಗಲಭೆ ಬಗ್ಗೆ ಪರಿಶೀಲನೆ ಮಾಡಲು ಬಿಜೆಪಿ ಸತ್ಯಶೋಧನೆ ಸಮತಿ ರಚಿಸಿರುವ ಬಗ್ಗೆ ವ್ಯಂಗ್ಯವಾಡಿದರು. ರಾಜ್ಯದಲ್ಲಿ ಬರಗಾಲ ಇದ್ದಾಗ ಬಿಜೆಪಿ ಯಾಕೆ ಸತ್ಯಶೋಧನೆ ಸಮಿತಿ ರಚನೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ನಾಗಮಂಗಲ ಗಲಭೆ ಬಗ್ಗೆ ಮಾತನಾಡುವ ಪ್ರಧಾನಿ ಯಡಿಯೂರಪ್ಪನವರ ಪೋಕ್ಸೋ ಕೇಸಿನ ಬಗ್ಗೆ, ಮುನಿರತ್ನ ಕೇಸಿನ ಬಗ್ಗೆ ಯಾಕೆ ಮಾತನಾಡಲ್ಲ ? ಅವರಿಗೆ ಮಾಹಿತಿ ಹೋಗಿರುತ್ತದೆ ತಾನೇ ? ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಬಿಜೆಪಿಯವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರು ಸಕರಾತ್ಮಕ ರಾಜಕೀಯ ಮಾಡದೆ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮತ್ತು ಸತ್ಯಕ್ಕೆ ಸಂಬಂಧವೇ ಇಲ್ಲ ಎಂದು ಪಾಟೀಲ್ ಕುಟುಕಿದರು.
BREAKING: ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ: ಯುವಕನನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿ ವಿಕೃತಿ