ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕನ್ನು ಖಾತರಿಗೊಳಿಸಿದ ಈ ಯೋಜನೆ ದೇಶ-ವಿದೇಶದ ಆರ್ಥಿಕ ತಜ್ಞರ ಶ್ಲಾಘನೆಯನ್ನು ಪಡೆದಿದೆ. ನರೇಗಾವು ಉದ್ಯೋಗ ಖಾತರಿ ನೀಡುವ ಒಂದು ನೈಜ ಯೋಜನೆಯಾಗಿತ್ತು, ಆದರೆ ನರೇಂದ್ರ ಮೋದಿ ಅವರ ಸರ್ಕಾರದಡಿ ಪ್ರಸ್ತಾಪಿತ ಹೊಸ ರಚನೆಯು ಆ ಖಾತರಿಯನ್ನು ಕಸಿಯಲಿದೆ ಮತ್ತು ಉದ್ಯೋಗದ ಭರವಸೆಯನ್ನು ರಾಜಕೀಯ ನಾಯಕರ ಇಚ್ಛೆಗೆ ಬಿಟ್ಟುಬಿಡುತ್ತದೆ. ಇದು ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ಆಳವಾಗಿಸಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುವ ನರೇಗಾ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವ ಎನ್ ಡಿ ಎ ಸರ್ಕಾರ, ಯೋಜನೆಯ ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಿರುವುದು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ ಅನುಸರಿಸಿಕೊಂಡು ಬರುತ್ತಿರುವ ಒಕ್ಕೂಟ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಈ ನಡೆಯಿಂದ ಬಡವರು ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ಹೆಚ್ಚಾಗಲಿದೆ. ಏಕೆಂದರೆ ಪ್ರಸ್ತಾಪಿತ ರೂಪದಲ್ಲಿ ಸ್ವಂತ ಸ್ಥಳದಲ್ಲಿ ಉದ್ಯೋಗ ಖಾತರಿಯಿಲ್ಲ, ಜೀವನ ನಿರ್ವಹಣೆಗಾಗಿ ಕುಟುಂಬಗಳು ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಲಿದೆ ಎಂದು ತಿಳಿಸಿದ್ದಾರೆ.
ಗ್ರಾಮಸ್ವರಾಜ್ಯದ ಕನಸನ್ನು ಬಿತ್ತಿಹೋಗಿದ್ದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಈ ಯೋಜನೆಗೆ ಇಟ್ಟಿರುವುದು ಅರ್ಥಪೂರ್ಣವಾದ ನಿರ್ಧಾರವಾಗಿತ್ತು. ವಿದೇಶದಲ್ಲಿ ಸುತ್ತಾಡುವಾಗ ಗಾಂಧಿ ಭಜನೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಮಾತ್ರ ಗಾಂಧೀಜಿ ಹೆಸರನ್ನು ಅಳಿಸಿಹಾಕುವ ಹುನ್ನಾರಗಳನ್ನು ನಡೆಸುತ್ತಲೇ ಇದ್ದಾರೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಮೆರೆಸಲು ಹೊರಟಿರುವ ಪರಿವಾರದಿಂದ ಇದಕ್ಕಿಂತ ಬೇರೆಯಾದುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ! ಎಂದಿದ್ದಾರೆ.
ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದಡಿ ಆರಂಭಗೊಂಡ ಪ್ರಮುಖ ಯೋಜನೆಗಳನ್ನು ಉಳಿಸುವ ಅಥವಾ ಬಲಪಡಿಸುವ ಬದಲು, ಕೇವಲ ಹೆಸರು ಬದಲಾಯಿಸುವುದಕ್ಕೆ ಸೀಮಿತವಾಗಿದೆ. ಈ ಸರ್ಕಾರಕ್ಕೆ “ಹೆಸರು ಬದಲಾಯಿಸುವ ಸಚಿವಾಲಯ”ವನ್ನು ಆರಂಭಿಸುವುದು ಸೂಕ್ತವಾಗಿರುತ್ತದೆ. ಪ್ರಧಾನಮಂತ್ರಿಯೇ ಆ ಸಚಿವಾಲಯದ ನೇತೃತ್ವವನ್ನು ವಹಿಸುವುದು ಇನ್ನಷ್ಟು ಅರ್ಥಪೂರ್ಣವಾಗಿರಲಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ಹಿಂದಿನ ಸರ್ಕಾರಗಳಡಿ ಆರಂಭಗೊಂಡ 25ಕ್ಕೂ ಹೆಚ್ಚು ಪ್ರಮುಖ ಕಾರ್ಯಕ್ರಮಗಳನ್ನು ಈಗಿನ ಸರ್ಕಾರವು ಕೇವಲ ಹೆಸರು ಬದಲಾಯಿಸಿದೆ ಅಥವಾ ಮರುಪ್ಯಾಕೇಜ್ ಮಾಡಿದೆ. ನಿರ್ಮಲ ಭಾರತ್ ಅಭಿಯಾನವನ್ನು ಸ್ವಚ್ಛ ಭಾರತ್ ಮಿಷನ್ ಎಂದು ಮರುನಾಮಕರಣ ಮಾಡಲಾಯಿತು. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಎಂದು ಮರುಬ್ರಾಂಡ್ ಮಾಡಲಾಯಿತು. ಅದೇ ರೀತಿ ರಾಜೀವ್ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಸೇರಿಸಲಾಯಿತು. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಯುಆರ್‌ಎಂ) ಅನ್ನು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್ (ಅಮ್ರುತ್) ಎಂದು ಪರಿವರ್ತಿಸಲಾಯಿತು. ಈ ಬದಲಾವಣೆಗಳು ಮೂಲ ಉದ್ದೇಶವನ್ನು ಮೂಲಭೂತವಾಗಿ ಬಲಪಡಿಸುವ ಅಥವಾ ವಿಸ್ತರಿಸುವ ಬದಲು, ಕೇವಲ ಹೆಸರು ಬದಲಾಯಿಸುವ ನಿರಂತರ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ಗುಡುಗಿದ್ದಾರೆ.
ಬಡವರ ಅನ್ನದ ಬಟ್ಟಲಿಗೆ ಕೈ ಹಾಕಿರುವ, ಬಾಪೂಜಿಗೆ ಅವಮಾನ ಮಾಡಿರುವ ಮತ್ತು ರಾಜ್ಯ ಸರ್ಕಾರಗಳ ಕತ್ತು ಹಿಸುಕಲು ಹೊರಟಿರುವ ನರೇಂದ್ರಮೋದಿ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ನಮ್ಮ ಪಕ್ಷ ಮತ್ತು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ಇದರ ವಿರುದ್ದ ರಾಜ್ಯವ್ಯಾಪಿ ಹೋರಾಟವನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ನರೇಗಾ ಯೋಜನೆಯನ್ನು ಅದರ ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಯೋಜನೆಯ ಲಕ್ಷಾಂತರ ಫಲಾನುಭವಿಗಳು ಕೂಡಾ ವಹಿಸಿಕೊಳ್ಳಬೇಕಾಗಿದೆ. ರಾಜ್ಯದ ಬಿಜೆಪಿ ನಾಯಕರನ್ನು ಹಿಡಿದುನಿಲ್ಲಿಸಿ ಈ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ದನಿ ಎತ್ತುವಂತೆ ಒತ್ತಡ ಹೇರಬೇಕು ಎಂಬುದಾಗಿ ತಿಳಿಸಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಿ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ…
— Siddaramaiah (@siddaramaiah) December 16, 2025
‘BMTC’ಗೆ ‘ಮೊಟರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್–2025’ ರಾಷ್ಟ್ರೀಯ ಪ್ರಶಸ್ತಿ
ಐಪಿಎಲ್ 2026 ಹರಾಜು: ಹೀಗಿದೆ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ | IPL 2026 Auction








