ಟೋಕಿಯೋ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಖ್ಯಾತ ವಿಜ್ಞಾನಿ ಮತ್ತು ಉದ್ಯಮಿಯಾಗಿರುವ ಡಾ. ಶ್ರೀಹರಿ ಚಂದ್ರಘಾಟಗಿ ಅವರು ಜಪಾನಿನ ಉದ್ಯಮ ತಂತ್ರಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ ಸೂಪರ್ ಮ್ಯಾನುಫ್ಯಾಕ್ಚರ್ಸ್ ಪ್ರಶಸ್ತಿಗೆ (ಚೋ ಮೊನೊಡುಜುಕುರಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಪಾನ್ ಸರ್ಕಾರದ ಆರ್ಥಿಕ, ವ್ಯಾಪಾರ, ಕೈಗಾರಿಕಾ ಸಚಿವಾಲಯ, ಟೋಕಿಯೋ ವಾಣಿಜ್ಯ ಮತ್ತು ಕೈಗಾರಿಕಾ ಮಂಡಲಿ, ಜಪಾನ್ ಬಿಜಿನೆಸ್ ಒಕ್ಕೂಟ ಮತ್ತು ನಿಕ್ಕನ್ ಕೋಗ್ಯ ಮಾಧ್ಯಮ ಸಂಸ್ಥೆಯ ಸಹಯೋಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪರಿಸರ ಸoರಕ್ಷಣೆ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಮಾಡಿದ ಉನ್ನತ ಸಾಧನೆಗಾಗಿ ಶ್ರೀಹರಿಯವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ, ಅಷ್ಟೇ ಅಲ್ಲ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಕೈಗಾರಿಕೆಗಳ ಗುಣಮಟ್ಟ ಮತ್ತು ಸುಧಾರಣೆಗೆ ಕೊಡುಗೆ ನೀಡಿದ ಅಪ್ರತಿಮ ಸಾಧಕರನ್ನು ಗುರುತಿಸಿ ಪುರಸ್ಕರಿಸುವ ನಿಟ್ಟಿನಲ್ಲಿಯೂ ಕನ್ನಡಿಗರಾಗಿರುವ ಶ್ರೀಹರಿಯವರು ಆಯ್ಕೆಯಾಗಿರುವುದು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಡಾ. ಶ್ರೀಹರಿ ಚಂದ್ರಘಾಟಗಿಯವರು ಕಳೆದ ಎರಡುವರೆ ದಶಕಗಳಿಂದ ಜಪಾನಿನ ರಾಜಧಾನಿ ಟೋಕಿಯೋದಲ್ಲಿಯೇ ನೆಲೆಸಿ, ಎಕೋಸೈಕಲ್ ಕಾರ್ಪೊರೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದರ ಅಧ್ಯಕ್ಷರಾಗಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಶ್ರೀಹರಿಯವರು ಮೈಕ್ರೋ ಬಯೋಲಜಿಸ್ಟ್ ಆಗಿ ಕೃಷಿ, ಜಲ ಸಂಪನ್ಮೂಲಗಳ ರಕ್ಷಣಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಲ್ಲದೇ ಕೈಗಾರಿಕಾ ಮಾಲಿನ್ಯಗಳನ್ನು ತಡೆಗಟ್ಟುವ ಸಂಶೋಧನೆ ನಡೆಸಿ ಅಮೂಲ್ಯ ಕೆಲಸ ಮಾಡಿದ್ದಾರೆ
ಡಾ. ಶ್ರೀಹರಿಯವರು ಮಣ್ಣಿನ ಸೂಕ್ಷ್ಮ ಜೀವಶಾಸ್ತ್ರದಲ್ಲಿ ಅಪಾರ ಸಂಶೋಧನೆ ನಡೆದಿದ್ದಲ್ಲದೇ, ತಾವು ಪಿಎಚ್. ಡಿ. ಅಧ್ಯಯನ ನಡೆಸುವಾಗ ಕೃಷಿ ಇಳುವರಿ ಹೆಚ್ಚಿಸುವಲ್ಲಿ ಗಿಡಗಳ ಬೇರಿನ ಮೇಲೆ ಸೂಕ್ಷ್ಮ ಜೀವಿಗಳ ಪ್ರಭಾವದ ಕುರಿತಾಗಿಯೂ ಹೆಚ್ಚಿನ ಬೆಳಕು ಚೆಲ್ಲಿದ್ದರು.
ತಮ್ಮ ಎಕೊಸೈಕಲ್ ಸಂಸ್ಥೆಯ ಮೂಲಕ 2006 ರಿಂದಲೂ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಿಸುವ ಜೊತೆಗೆ ಅಂತರ್ಜಲದ ಮಾಲಿನ್ಯ ತಡೆಗಟ್ಟಲು ಹಲವು ನೂತನ ತಂತ್ರಜ್ಞಾನಗಳನ್ನು ಇವರು ಸಂಶೋಧಿಸಿ ನೀಡಿದ್ದಾರೆ.
ಮಾಲಿನ್ಯ ಮಯವಾದ ನೀರಿನಲ್ಲಿ ಮಾರಕ ಸೂಕ್ಷ್ಮ ಜೀವಿಗಳನ್ನು ನಿಗ್ರಹಿಸಲು ಪರ್ಯಾಯ ಸೂಕ್ಷ್ಮಜೀವಿಗಳನ್ನು ಬಳಸುವ ತಂತ್ರಜ್ಞಾನದ ರೂವಾರಿಯಾಗಿರುವ ಶ್ರೀಹರಿಯವರ ಅಪೂರ್ವ ಸೇವೆಯನ್ನು ಜಪಾನಿನ ಮತ್ತು ವಿಶ್ವದ ಅನೇಕ ಪ್ರಮುಖ ಕಂಪನಿಗಳೂ ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ.
ಈ ಬಗ್ಗೆ ಜಪಾನ್ ಸಚಿವಾಲಯದ ಪ್ರಶಸ್ತಿಯೂ ಒಳಗೊಂಡಂತೆ ಶ್ರೀಹರಿಯವರು ಹಲವು ಪ್ರಮುಖ ಪ್ರಶಸ್ತಿಗಳಿಗೆ ಈಗಾಗಲೇ ಪಡೆದಿದ್ದಾರೆ.
ಈಗ ಮತ್ತೊಂದು ಈ ಅಂತರರಾಷ್ಟ್ರೀಯ ಪ್ರಶಸ್ತಿಯ ಗೌರವ ಇವರಿಗೆ ಒಲಿದು ಬಂದಿದ್ದು, ಇದರಿಂದ ಇವರ ಪರಿಶ್ರಮಕ್ಕೆ ಮತ್ತಷ್ಟು ಸಾರ್ಥಕತೆ ದೊರೆತಂತಾಗಿದೆ. ಈ ಭೂಮಿಗೆ ಎದುರಾಗಿರುವ ಆಪತ್ತನ್ನು ಗುಣಪಡಿಸುವುದು ತಮ್ಮ ಆದ್ಯತೆಯ ಕೆಲಸ ಎಂಬುದು ಇವರ ಧ್ಯೇಯ ವಾಕ್ಯವಾಗಿದೆ.








