ನವದೆಹಲಿ: ಮೊಬೈಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತು ಟೆಲಿಕಾಂ ಇಲಾಖೆಯಿಂದ ಸಿಹಿ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಕೇವಲ 28 ದಿನಗಳ ವ್ಯಾಲಿಡಿಟಿ ಮಾತ್ರವಲ್ಲದೆ, ಪೂರ್ತಿ 30 ದಿನಗಳ ರೀಚಾರ್ಜ್ ಪ್ಲಾನ್ ಅನ್ನು ನೀಡಬೇಕೆಂದು ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸೂಚನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ್ದ ರಾಘವ್ ಚಡ್ಡಾ
ಈ ಹಿಂದೆ ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ, ಟೆಲಿಕಾಂ ಕಂಪನಿಗಳ ಈ ’28 ದಿನಗಳ ವ್ಯಾಲಿಡಿಟಿ’ ತಂತ್ರದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು.
13 ಬಾರಿ ರೀಚಾರ್ಜ್: ವರ್ಷಕ್ಕೆ 12 ತಿಂಗಳುಗಳಿದ್ದರೂ, 28 ದಿನಗಳ ವ್ಯಾಲಿಡಿಟಿಯಿಂದಾಗಿ ಸಾಮಾನ್ಯ ಜನ ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಬೇಕಾದ ಪರಿಸ್ಥಿತಿ ಇದೆ.ಇದು ಜನಸಾಮಾನ್ಯರ ಜೇಬಿಗೆ ಅನಗತ್ಯ ಕತ್ತರಿ ಹಾಕುವ ತಂತ್ರ ಎಂದು ಅವರು ದೂರಿದ್ದರು.
ಕೇಂದ್ರ ಸಚಿವರ ಸ್ಪಷ್ಟ ಸೂಚನೆ
ಸಂಸದರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಟೆಲಿಕಾಂ ಆಪರೇಟರ್ಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. “ಕಂಪನಿಗಳು 28 ದಿನಗಳ ಪ್ಲಾನ್ ಜೊತೆಗೆ ಕಡ್ಡಾಯವಾಗಿ 30 ದಿನಗಳ ಪ್ಲಾನ್ ಕೂಡ ಗ್ರಾಹಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ಇರಬೇಕು” ಎಂದು ಅವರು ಹೇಳಿದ್ದಾರೆ.
ಬಳಕೆಯಾಗದ ಡೇಟಾ ಮುಂದಿನ ದಿನಕ್ಕೆ ವರ್ಗಾವಣೆ?
ರೀಚಾರ್ಜ್ ಅವಧಿಯ ಜೊತೆಗೆ ಡೇಟಾ ಬಳಕೆಯ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸ್ತುತ, ದಿನಕ್ಕೆ ನಿಗದಿಪಡಿಸಿದ ಡೇಟಾ (ಉದಾಹರಣೆಗೆ 1.5 GB) ಪೂರ್ತಿ ಬಳಕೆಯಾಗದಿದ್ದರೆ ಅದು ಅಂದೇ ಮುಕ್ತಾಯವಾಗುತ್ತದೆ. ಉಳಿದ ಡೇಟಾವನ್ನು ಮರುದಿನಕ್ಕೆ ಕೊಂಡೊಯ್ಯುವ (Data Roll-over) ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಬೇಡಿಕೆಯನ್ನೂ ಸರ್ಕಾರ ಪರಿಗಣಿಸುತ್ತಿದೆ.








