ಕಲಬುರಗಿ : ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡು ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಚಿತ್ತಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನಿಮಗೆ ಹಲವಾರು ಬಾರಿ ಮಾತು ಕೊಟ್ಟಿದ್ದೇನೆ. ನಮ್ಮ ಭಾಗದ ಅಭಿವೃದ್ದಿಯೇ ನನಗೆ ಮುಖ್ಯ ಗುರಿ. ಇಂದು ಕೂಡಾ ₹ 62 ಕೋಟಿ ವೆಚ್ಚದಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಚುನಾವಣೆ ಪೂರ್ವದಲ್ಲಿ ವಾಗ್ದಾನ ನೀಡಿದಂತೆ ₹ 52,000 ಕೋಟಿ ಖರ್ಚು ಮಾಡಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ.
ಈಗಾಗಲೇ 900 ಇಂಜಿನಿಯರ್‌ಗಳನ್ನು ಇಲಾಖೆಯಲ್ಲಿ ಭರ್ತಿ ಮಾಡಲಾಗಿದ್ದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡು ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಿದ್ದೇವೆ. ನನಗೆ ಇನ್ನು ಒಂದು ವರ್ಷ ಸಮಯಾವಕಾಶ ನೀಡಿ ಚಿತ್ತಾಪುರ ಅಭಿವೃದ್ದಿಯ ಚಿತ್ರಣವನ್ನೇ ಬದಲಿಸಲಿದ್ದೇನೆ. ಕಲ್ಯಾಣ ಪಥ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ರಸ್ತೆಗಳ ಅಭಿವೃದ್ದಿಗೆ ₹1,000 ಕೋಟಿ ಮೀಸಲಿಡಲಾಗಿದೆ. ಕೋಲ್ಡ್ ಸ್ಡೋರೇಜ್ ಹಾಗೂ ಸಾಮೂಹಿಕ ಶೌಚಾಲಯ ನಿರ್ಮಾಣ ನನ್ನ ಮುಂದಿನ ಗುರಿಯಾಗಿದೆ.
ಇತ್ತೀಚಿಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹7,000 ಕೋಟಿ ಹಾಗೂ ಚಿತ್ತಾಪುರಕ್ಕೆ ₹ 300 ಕೋಟಿ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಜಿಲ್ಲೆಯ ಮೂವತ್ತು ಗ್ರಾಮಗಳ ಅಭಿವೃದ್ದಿಯ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಇದು ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ, ವಾಡಿಯ ಸಮಗ್ರ ಅಭಿವೃದ್ದಿಯ ನೀಲನಕ್ಷೆಯೂ ಸಿದ್ಧವಾಗಿದೆ. ಇದಕ್ಕೆ ₹25 ಕೋಟಿ ತೆಗೆದಿರಿಸಲಾಗಿದೆ. ಚಿತ್ತಾಪುರ ಪಟ್ಟಣದಲ್ಲಿ ಮೃಗಾಲಯ, ವಿಜ್ಞಾನ ಕೇಂದ್ರಗಳ ಸ್ಥಾಪನೆಯ ಗುರಿ ಹೊಂದಲಾಗಿದೆ.
ಚಿತ್ತಾಪುರ ತಾಲೂಕಿನಲ್ಲಿ “ಕಾಯಕ ಗ್ರಾಮ” ಯೋಜನೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಇದರಲ್ಲಿ ಸಂಸದರ ಅನುದಾನ ಕೂಡಾ ಬಳಕೆಯಾಗಲಿದೆ. ಇದರ ಹಿಂದೆ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಕನಸಿದೆ. ಈ ಯೋಜನೆಯಡಿಯಲ್ಲಿ ಕನಿಷ್ಠ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು.
ಚಿತ್ತಾಪುರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದಕ್ಕೆ ನಾನು ಸದಾ ಕಾರ್ಯೋನ್ಮುಖನಾಗಿರುತ್ತೇನೆ.