ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ಘೋಷಿಸಲಾಗಿದೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಬರೋಬ್ಬರಿ 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಿಎಂ ಪ್ರಕಟಿಸಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದರೊಂದಿಗೆ ಶಾಲಾ ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ಅಳವಡಿಕೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಹೈಲೈಟ್ಸ್ ಇಲ್ಲಿದೆ:
ಶಿಕ್ಷಕರ ನೇಮಕಾತಿ ಮತ್ತು ಶಾಲೆಗಳ ಉನ್ನತೀಕರಣ
ಬೃಹತ್ ನೇಮಕಾತಿ: 2026-27ನೇ ಸಾಲಿನಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳ ಭರ್ತಿ.
ಕರ್ನಾಟಕ ಪಬ್ಲಿಕ್ ಶಾಲೆ (KPS): ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಯೋಜನೆಯಡಿ ಒಟ್ಟು 800 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ 3,900 ಕೋಟಿ ರೂ. ಮೀಸಲು. (ವರ್ಗಾವಣೆ ಕೌನ್ಸೆಲಿಂಗ್ ವೇಳೆ ಈ ಶಾಲೆಗಳ ಹುದ್ದೆಗಳ ಭರ್ತಿಗೆ ಮೊದಲ ಆದ್ಯತೆ).
ಶಾಲೆಗಳ ಮೇಲ್ದರ್ಜೆ: 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢ ಶಾಲೆಗಳಾಗಿ ಮತ್ತು 50 ಪ್ರೌಢ ಶಾಲೆಗಳು ಪಿಯು ಕಾಲೇಜುಗಳಾಗಿ ಉನ್ನತೀಕರಣ.
ಮೂಲಸೌಕರ್ಯ ಮತ್ತು ನಿರ್ವಹಣಾ ಅನುದಾನ
ಹೊಸ ಕೊಠಡಿ ನಿರ್ಮಾಣ ಮತ್ತು ದುರಸ್ತಿಗೆ ಬರೋಬ್ಬರಿ 565 ಕೋಟಿ ರೂ. ಅನುದಾನ.
ಶೌಚಾಲಯ ನಿರ್ಮಾಣಕ್ಕೆ 75 ಕೋಟಿ ರೂ. ಹಾಗೂ ಪೀಠೋಪಕರಣ ಖರೀದಿಗೆ 25 ಕೋಟಿ ರೂ.
ಶಾಲಾ-ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂ. ಮೀಸಲಿಡಲಾಗಿದ್ದು, ಈ ಹಣವನ್ನು ನೇರವಾಗಿ ಶಾಲಾ ಅಭಿವೃದ್ಧಿ ಸಮಿತಿ (SDMC) ಖಾತೆಗೆ ವರ್ಗಾವಣೆ ಮಾಡಲಾಗುವುದು.
ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಮರುನಿರ್ಮಾಣಕ್ಕೆ 10 ಕೋಟಿ ರೂ.
ತಂತ್ರಜ್ಞಾನ ಮತ್ತು ನೂತನ ಸೌಲಭ್ಯಗಳು
AI ಡಿಜಿಟಲ್ ಟ್ಯೂಟರ್: ಐಐಟಿ ಧಾರವಾಡದ ಸಹಯೋಗದಲ್ಲಿ 8 ರಿಂದ 12ನೇ ತರಗತಿಯ 12.28 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಯಕ್ತಿಕ ಕಲಿಕಾ ಡಿಜಿಟಲ್ ಟ್ಯೂಟರ್ ಸೌಲಭ್ಯ (5 ಕೋಟಿ ರೂ. ವೆಚ್ಚ).
ದ್ವಿಭಾಷಾ ಬೋಧನೆ: ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿ ಜಾರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಂಗ್ಲಿಷ್ ಭಾಷಾ ತರಬೇತಿ ನೀಡಲು 24 ಕೋಟಿ ರೂ. ಮೀಸಲು.
ಉಚಿತ ಪುಸ್ತಕ ವಿತರಣೆ: 2026-27ರಿಂದ ‘ವಿದ್ಯಾವಿಕಾಸ ಯೋಜನೆ’ಯಡಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಪೂರ್ವ ಪ್ರಾಥಮಿಕ ಮಕ್ಕಳಿಗೆ ಚಟುವಟಿಕೆ ಪುಸ್ತಕ ಹಾಗೂ 1-10ನೇ ತರಗತಿ ಮಕ್ಕಳಿಗೆ ಮೌಲ್ಯ ಶಿಕ್ಷಣ ಪುಸ್ತಕ ವಿತರಣೆ.
ನೇರ ನಗದು ವರ್ಗಾವಣೆ (DBT): ವಿದ್ಯಾರ್ಥಿಗಳಿಗೆ ಸಿಗುವ ವಿವಿಧ ಸವಲತ್ತುಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್.
ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಟ್ಟುನಿಟ್ಟಿನ ನಿಯಮಗಳು
ಸೋಷಿಯಲ್ ಮೀಡಿಯಾ ನಿಷೇಧ: ಹೆಚ್ಚುತ್ತಿರುವ ಮೊಬೈಲ್ ಗೀಳಿನಿಂದ ಮಕ್ಕಳನ್ನು ರಕ್ಷಿಸಲು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ದಿಟ್ಟ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ.
ಡ್ರಗ್ಸ್ ಮುಕ್ತ ಕ್ಯಾಂಪಸ್: ಶಾಲಾ-ಕಾಲೇಜು ಮತ್ತು ವಿವಿಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಕಠಿಣ ನಿಯಮ ಜಾರಿ ಹಾಗೂ ಜಾಗೃತಿ ಕಾರ್ಯಕ್ರಮ.
ಮಾನಸಿಕ ಆರೋಗ್ಯ: ವಿದ್ಯಾರ್ಥಿಗಳ ಒತ್ತಡ ನಿವಾರಣೆಗೆ 204 BRC ಕೇಂದ್ರಗಳಲ್ಲಿ ತಲಾ ಒಬ್ಬರು ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರ (Counselors) ನೇಮಕ.








