ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ವಿಧಾನಸಭೆಯಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದರು. ಬಸವರಾಜ ಬೊಮ್ಮಾಯಿ ಅವರು 2023 ರ ಫೆಬ್ರುವರಿಯಲ್ಲಿ 3.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದರು. 2024-25ನೇ ಸಾಲಿಗೆ ನಾನು ಮಂಡಿಸಿದ ಆಯವ್ಯಯದ ಗಾತ್ರ 3,71,343 ಕೋಟಿ ರೂ. ನಷ್ಟಿದ್ದು, ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ಗಿಂತ 62,200 ಕೋಟಿ ರೂ. ನಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023 ರಲ್ಲಿ ಮಂಡಿಸಿದ ಬಜೆಟ್‌ಗಿಂತ ಇದು 43,601 ಕೋಟಿ ರೂ. ಹೆಚ್ಚಳವಾಗಿದೆ.
ಅಂತೆಯೇ ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂರೆ 2,41,723 ಕೋಟಿ ರೂ. ಹೆಚ್ಚು. ಅಭಿವೃದ್ಧಿ ಇಲ್ಲದೆ ಆಯವ್ಯಯ ಗಾತ್ರ ಹಾಗೂ ಜಿಡಿಪಿ ಹೆಚ್ಚಳವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ಉತ್ತರದ ಇತರ ಮುಖ್ಯಾಂಶಗಳು:
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ ಬಜೆಟ್ ಓದುವಾಗ ವಿರೋಧ ಪಕ್ಷದವರು ಗೈರು ಹಾಜರಾದದ್ದು.
ಇವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಕಾಳಜಿ ಇಲ್ಲ.
ಕಾಂಗ್ರೆಸ್ ನವರು 9 ಜನ , ಬಿಜೆಪಿ 13 ಜನ ಹಾಗೂ ಜೆಡಿಎಸ್ 3 ಜನ ಭಾಗವಹಿಸಿದ್ದಾರೆ. ಇಷ್ಟೂ ಸದಸ್ಯರು ಬಜೆಟ್ ಬಗ್ಗೆ ಅನೇಕ ಸಲಹೆ ಸೂಚನೆ ನೀಡಿದ್ದಾರೆ. ಬಜೆಟ್‌ನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಸ್ವಾಗತ ಮಾಡುತ್ತೇನೆ. ಅವರ ಸಲಹೆ- ಸೂಚನೆಗಳನ್ನು ಸರ್ಕಾರ ಮುಂದಿನ ವರ್ಷದಲ್ಲಿ ಆರ್ಥಿಕ ವರ್ಷದಲ್ಲಿ ಏನೇನು ಮಾಡಬೇಕು ಅದೆಲ್ಲವನ್ನೂ ಮಾಡುತ್ತೇವೆಂದು ಹೇಳಬಯಸುತ್ತೇನೆ.
2024-25ನೇ ಆಯವ್ಯಯದಲ್ಲಿ ಒಟ್ಟು ಬಜೆಟ್ ಗಾತ್ರ 3,71,343 ಕೋಟಿ ರೂ. ಗಳಾಗಿದ್ದು, ಇದರಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ, ಬಂಡವಾಳ ವೆಚ್ಚ __ ಕೋಟಿ ರೂ. ಗಳಾಗಿದ್ದು, ನಾವು ಅಭಿವೃದ್ಧಿಗೂ ಆದ್ಯತೆ ನೀಡಿರುವುದಕ್ಕೆ ಇದು ಸಾಕ್ಷಿ.
ವಿರೋಧ ಪಕ್ಷದವರು ಅಭಿವೃದ್ಧಿ ಶೂನ್ಯ ಎಂದಿದ್ದಾರೆ. ಒಟ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,20,000 ಕೋಟಿ ರೂ. ವೆಚ್ಚದ ಹಂಚಿಕೆ ಮಾಡಿದ್ದೇವೆ. 52,009 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದು, ಉಳಿದ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ವಿರೋಧ ಪಕ್ಷದವರು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದದ್ದು.
ಮತದಾರರು ಬಿಜೆಪಿಯವರನ್ನು ತಿರಸ್ಕಾರ ಮಾಡಿದರು. ನಮಗೆ 136 ಸೀಟು ಕೊಟ್ಟರು ಹಾಗೂ 43% ಮತ ನೀಡಿದರು. ಇವರು ಭ್ರಷ್ಟಾಚಾರ ಮಾಡಿದ್ದರಿಂದ ಕೇವಲ 66 ಜನ ಗೆಲ್ಲಲು ಸಾಧ್ಯವಾಯಿತು. ಇವರು ಜನರ ಸಂಪೂರ್ಣ ಆಶೀರ್ವಾದದೊಂದಿಗೆ ಅಧಿಕಾರ ಮಾಡಲಿಲ್ಲ. ಇವರು ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಇದಕ್ಕೆ ಕಾರಣ ಮಿ. ಯಡಿಯೂರಪ್ಪ ಮತ್ತು ಇತರರು. ಇವರು ಯಾವತ್ತೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬರಲಿಲ್ಲ.
ಜಿಡಿಪಿ- 2023- 24 ರಲ್ಲಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂರೆ 2,41,723 ಕೋಟಿ ರೂ. ಹೆಚ್ಚು.
ಆದ್ದರಿಂದ ಜಿಡಿಪಿಯೂ ಹೆಚ್ಚಾಗಿದೆ, ಬಜೆಟ್ ಗಾತ್ರವೂ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ಮಾಡಿರುವ ಆಪಾದನೆಯಲ್ಲಿ ಯಾವುದೇ ತಿರುಳಿಲ್ಲ ಎಂಬುದು ಸಾಬೀತಾಗುತ್ತದೆ.
ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 36,000 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ – ಈ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಬಳಸಲಾಗಿದೆ. ಮುಂದಿನ ಬಜೆಟ್ ನಲ್ಲಿ 52,009 ಕೋಟಿ ಒದಗಿಸಿದ್ದು, ಇದರೊಂದಿಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಶಾಂತಿ ಸುವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧೀಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ.
ಬಿಜೆಪಿಯವರಿಗೆ ಜನರ ಆಶೀರ್ವಾದ ಪಡೆಯುವ ಯೋಗ್ಯತೆ ಇಲ್ಲ. ಇವರು ನಮಗೆ ದೇಶಭಕ್ತಿ ಪಾಠ ಹೇಳಿ ಕೊಡಲು ಬರುತ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಹಿಂಬಾಗಿಲಿನಿಂದ ಅಧಿಕಾರ ಅನುಭವಿಸಲು ಬಂದವರು ಇವರು.
ಆರ್. ಎಸ್. ಎಸ್ 1925ರಲ್ಲೇ ಅಸ್ತಿತ್ವಕ್ಕೆ ಬಂತು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.
ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದರು. ಇದರ ಬಗ್ಗೆ ಮೋದಿ ಅವರಾಗಲಿ, ಪಕ್ಷದ ಹಿರಿಯರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿ
ಆರ್.ಎಸ್.ಎಸ್.ನವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದಾಗಲೂ ಸಂಘ ಪರಿವಾರದ ಹೆಡಗೇವಾರ್ ಆಗಲಿ, ಗೋಲ್ವಾಲ್ಕರ್ ಆಗಲಿ ಪಾಲ್ಗೊಂಡಿಲ್ಲ. ಬಿಜೆಪಿ ಯಿಂದ ನಾವು ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ಧರ್ಮದ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವವರು ಬಿಜೆಪಿ. ಸಬ್ ಕಾ ‘ಸಾಥ್ ಸಬ್ ಕಾ ವಿಕಾಸ್’ ಎನ್ನುವುದು ಕೇವಲ ಬಾಯಿ ಮಾತು. ಇಂಥವರು ದೇಶವನ್ನು ಆಳಲು ಲಾಯಕ್ಕೇ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು ಜನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷಕ್ಕೆ ಅಧಿಕಾರ ನೀಡುತ್ತಾರೆ ಎಂದು ಖಚಿತವಾಗಿ ನುಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಕಾಂಗ್ರೆಸ್ ಪರವಾಗಿದ್ದುದ್ದನ್ನು ಮರೆ ಮಾಚಲು ವಿಧಾನ ಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ ಎಂದರು.
ಪೈಪೋಟಿಗೆ ಬಿದ್ದಂತೆ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚರ್ಚೆಯಲ್ಲಿ 30‰ ಕೇಂದ್ರ ಸರ್ಕಾರವನ್ನು ಹೊಗಳಿದ್ದಾರೆ. . ಜೆಡಿಎಸ್ ಕೂಡ ಪೈಪೋಟಿಗೆ ಬಿದ್ದಂತೆ ಅದನ್ನೇ ಮಾಡಿದೆ ಎಂದರು.
ಜೆಡಿಎಸ್ ತಮ್ಮ ಪಕ್ಷದ ಹೆಸರಿನಲ್ಲಿರುವ “ಎಸ್” ನ್ನು ತೆಗೆದುಹಾಕುವುದು ಉತ್ತಮ. ಏಕೆಂದರೆ ಅದು ಈಗ ಜಾತ್ಯತೀತ ವಾಗಿ ಉಳಿದಿಲ್ಲ ಎಂದು ಕುಟುಕಿದರು.
ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ
ಏಳು ಕೋಟಿ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, 1.40 ಸಾವಿರ ಕೋಟಿ ನಮ್ಮಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ. 100 ರೂ.ತೆರಿಗೆ ಕೊಟ್ಟರೆ ನಮಗೆ 12 ರೂ.ಗಳು ಮಾತ್ರ ಕೇಂದ್ರದಿಂದ ತೆರಿಗೆ ಬರುತ್ತಿದೆ. ಇದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಗೆ ನಾಚಿಕೆಯಾಗಬೇಕು ಎಂದರು.
ಕಾಳಜಿ ಇದೆಯೇ
14 ನೇ ಹಣಕಾಸು ಆಯೋಗದಲ್ಲಿ 4.7 % ಹಾಗೂ 15 ನೇ ಹಣಕಾಸು ಆಯೋಗದಲ್ಲಿ 3.64 % ರಾಜ್ಯಕ್ಕೆ ನಿಗಡಿಯಾಗಿ ಶೇ 1.07% ರಷ್ಟು ಕಡಿಮೆಯಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ 2 ನೇ ರಾಜ್ಯವಾಗಿರುವ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯವಾಗಿದೆ. ಕೇಂದ್ರದ ಅನ್ಯಾಯವನ್ನು ಬೆಂಬಲಿಸುವ ಬಿಜೆಪಿಗೆ ಕನ್ನಡಿಗರ ಬಗ್ಗೆ ಕಾಳಜಿ ಇದೆಯೇ ಎಂದರು.
ನರೇಂದ್ರ ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಗುಜರಾತಿನಿಂದ ತೆರಿಗೆ ಸಂಗ್ರಹಿಸಿಸಬೇಡಿ ಎಂದಿದ್ದರು. ನಾವು ಆ ಮಾತು ಹೇಳಿಲ್ಲ.
ನಿಮ್ಮದು ನಿಶಕ್ತಿ
ಇದೇ ವೇಳೆಗೆ ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಕೂಗು ಹಾಕುತ್ತಿದ್ದ ವಿರೋಧಪಕ್ಷದವರನ್ನು ಉದ್ದೇಶಿಸಿ ನಿಮ್ಮದು ಕೇವಲ ನಿ:ಶಕ್ತಿ. ಮೋದಿ ಹೆಸರಿನ ಮೇಲೆ ನಡೆಸುತ್ತಿದ್ದೀರಿ.ಸಮಾಜ ಒಡೆಯುವ ಕೆಲ್ಸ ನಿಮ್ಮದು. ನಾವು ಜೈ ಸೀತಾ ರಾಮ್ ಎನ್ನುತ್ತೇವೆ ಎಂದು ಮುಖ್ಯ ಮಂತ್ರಿಗಳು ಘೋಷಣೆ ಕೂಗಿದರು.
ಬಿಜೆಪಿ ಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ ಎಂದು ತಿವಿದರು.
ಬಿಜೆಪಿಯವರು ರಾಮಾಯಣ, ಮಹಾಭಾರತ ಓದಿಯೇ ಇಲ್ಲ
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಮುಖ್ಯಮಂತ್ರಿಗಳು
15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ. ಪರಿಹಾರ ಜೂನ್ 2022 ಸ್ಥಗಿತಗೊಳಿಸಲಾಗಿದೆ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈಬಾರಿ ಕಡಿತಗೊಳಿಸಿದ್ದಾರೆ. ಇಷ್ಟೆಲ್ಲ ಅನ್ಯಾಯವಾಗುತ್ತಿದೆ ಎಂದರೂ ಅವರು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ನೀವು ಕನ್ನಡಿಗರಾ? ನಾಡ ದ್ರೋಹಿಗಳು ಎಂದು ಹೇಳಬೇಕಾಗುತ್ತದೆ. ಎಂದರು.
ನಾವೂ ರಾಮನ ಭಕ್ತರೇ
ಮಾತೆತ್ತಿದರೆ ಜೈಶ್ರೀರಾಮ್ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ.
ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಕಾಂಗ್ರೆಸ್ ಪಕ್ಷದವರು. ಇವರ ತರ ಬುರ್ಖಾ ಹಾಕಿದವರು, ಟೋಪಿ ಹಾಕಿದವರು ಬರಬೇಕಾಗಿಲ್ಲ ಎನ್ನುವುದಿಲ್ಲ.
ಬೆಲೆ ಏರಿಕೆ, ಸಂಕಷ್ಟಕ್ಕೆ ಗ್ಯಾರಂಟಿ ಉತ್ತರ
ಸಬ್ ಕಾ ಸಾಥ್ ಎಂದವರು ಪೆಟ್ರೋಲ್ ಡೀಸೆಲ್ ಬೆಲೆ, ಗ್ಯಾಸ್ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ.
ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ. ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಈ ಮೋದಿ ಗ್ಯಾರಂಟಿಯಲ್ಲಿ ಶೇ. 50 ರಿಂದ 60 ರಷ್ಟು ಪಾಲು ಕರ್ನಾಟಕದ್ದೂ ಇದೆ. ಇವರು ಕನ್ನಡಿಗರಿಗೆ ದ್ರೋಹ ಮಾಡುತ್ತಿಲ್ಲವೇ?
25 ಜನ ಎಂಪಿಗಳು ಗೆದ್ದು ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಿರುವ ಅನುದಾನ ಕೇಳಿದ್ದಾರೆಯೇ? ಅವರಿಗೆ ತಾಕತ್ತಿಲ್ಲ.
ಬರ ಪರಿಹಾರಕ್ಕೆ ಪ್ರಸ್ತಾವನೆ ಅಕ್ಟೋಬರ್ ನಲ್ಲಿಯೇ ಕಳಿಸಿದ್ದೆವು. ನೇರವಾಗಿ ಪ್ರಧಾನಮಂತ್ರಿಯವರು ಹಾಗೂ ಅಮಿತ್ ಷಾ ಅವರನ್ನು ಭೇಟಿ ಮಾಡಿದೆ. 240 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಪರಿಹಾರ ನೀಡುವಂತೆ ಮನವಿ ಮಾಡಿದೆ. ಡಿಸೆಂಬರ್ 23ರಂದು ಸಭೆ ಕರೆಯುವುದಾಗಿ ಕೇಂದ್ರ ಸಚಿವರು ಹೇಳಿದರೂ ಈ ವರೆಗೆ ಸಭೆ ನಡೆಸಿಲ್ಲ. ನಾವು ತಾತ್ಕಾಲಿಕವಾಗಿ 33 ಲಕ್ಷ ರೈತರಿಗೆ ಪರಿಹಾರ ವಿತರಿಸಿದ್ದೇವೆ.
ಈ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು.
ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ.
ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು.
ಸೆಸ್, ಸರ್ಚಾರ್ಜ್ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್, ಸರ್ಚಾರ್ಜ್ ಮೂಲ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್ ಸರ್ಚಾರ್ಜ್ 1958 ರಿಂದ ವಿಧಿಸಲಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್ ಸರ್ಚಾರ್ಜ್ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ಸಂವಿಧಾನ ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು.
ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು.
ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ.
ಎರಡು ವರ್ಷದಲ್ಲಿ ಉಳಿತಾಯ ಬಜೆಟ್: ಸಿಎಂ ಭರವಸೆ
ರಾಜ್ಯ ಸರ್ಕಾರ ಒಂದೇ ಒಂದು ಬಾರಿ 2020-21 ರಲ್ಲಿ ಶೇ 3 ರ ಮಿತಿ ದಾಟಿದೆ. ಇನ್ನು ಎರಡು ವರ್ಷದಲ್ಲಿ ಆಯವ್ಯಯವನ್ನು ರಾಜಸ್ವ ಉಳಿತಾಯಕ್ಕೆ ತಂದೇ ತರುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ.
2018 ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್ ವೇಳೆಗೆ 5.23 ಲಕ್ಷ ಕೋಟಿ ಇದೆ. ಇವರು ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ.
ಕೇಂದ್ರದಲ್ಲಿ 2013-14 ರಲ್ಲಿ 53,10,000 ಕೋಟಿ ಸಾಲ ಇತ್ತು. ಈಗ 183,67,132 ಕೋಟಿ ಸಾಲ ಇದೆ. ನರೇಂದ್ರ ಮೋದಿಯವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ನರೇಂದ್ರ ಮೋದಿಜಿ, ಬಿಜೆಪಿಯವರು ಅಲ್ಲವೇ?.
ನಾವು ಬಡವರಿಗೆ, ರೈತರಿಗೆ, ಹೆಣ್ಣುಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದೇವೆ.
ರಾಜ್ಯದ ಭೌತಿಕ ಆರೋಗ್ಯ, ಆರ್ಥಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ- ಈ ನಾಲ್ಕು ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದ್ದೇವೆ.
ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ
ನಾಡಿನ ಜನರಿಗೆ ಮಾಡಿರುವ ಅನ್ಯಾಯವನ್ನು ಸಮರ್ಥನೆ ಮಾಡುವ ಬಿಜೆಪಿ ನಾಯಕರಿಗೆ ಮೋದಿ ಮುಂದೆ ನಾಡಿನ ಹಕ್ಕನ್ನು, ನಾಡಿನ ಜನರ ಪಾಲನ್ನು ಕೇಳುವ ತಾಕತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ರಾಜ್ಯದ ಸ್ವಂತ ತೆರಿಗೆ ಶೇ 78% ಇದ್ದರೆ 22% ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ಗುಜರಾತಿಗೆ 75% ಸ್ವಂತ ತೆರಿಗೆ ಯಿಂದ ಬಂದರೆ 17% ಕೇಂದ್ರದಿಂದ ಹಾಗೂ ಸಹಾಯಧನ ಸೇರಿ 25% ಕೇಂದ್ರದಿಂದ ಹೋಗುತ್ತಿದೆ. ಉತ್ತರ ಪ್ರದೇಶಕ್ಕೆ 48% ಸ್ವಂತ ತೆರಿಗೆ ಇದ್ದರೆ 32% ಹಾಗೂ 20% ಸೇರಿ ಒಟ್ಟು 52% ಕೇಂದ್ರದಿಂದ ಹೋಗುತ್ತಿದೆ. ಆದರೆ ನಮಗೆ ಮಾತ್ರ ಕೇವಲ ಕೇವಲ ಕೇವಲ ಶೇ22% ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೇಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ 50 ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ರೈಲ್ವೆ ಇಂದ ಬಂದ ಆದಾಯವನ್ನು ಅವರೇ ಇಟ್ಟುಕೊಳ್ಳುತ್ತಾರೆ. ಟೋಲ್ ಸಂಗ್ರಹದಿಂದ ಬರುವ ಆದಾಯವನ್ನೂ ನಮ್ಮ ನಾಡಿನ ಜನರಿಗೆ ವಾಪಾಸ್ ಕೊಡುವುದಿಲ್ಲ ಎಂದು ರಾಜ್ಯಗಳಿಗೆ ತೆರಿಗೆಯಲ್ಲಿ ಆಗುತ್ತಿರುವ ಪಟ್ಟಿಯನ್ನೇ ನೀಡಿದರು.
ಕೇಂದ್ರ ಸರ್ಕಾರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ 50257 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ 13 ಸಾವಿರ ಕೋಟಿ ಕೇಂದ್ರ ಪುರಸ್ಕೃತ ಯೋಜನೆಗಳೂ ಸೇರಿವೆ ಎಂದರು.
ಅದರಲ್ಲಿಯೂ ಕೇಂದ್ರದ ಪಾಲು ಕಡಿಮೆ ಇದ್ದು, ನಮ್ಮ ಪಾಲು ಹೆಚ್ಚಿದೆ ಎಂದರು.
2013 ಮಾರ್ಚ್ ವರೆಗೆ 2067 ಕಿಮೀ ರಸ್ತೆಗಳಾಗಿವೆ. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ಸರ್ವಶಿಕ್ಷಣ ಅಭಿಯಾನದಡಿ 702 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟರೆ ನಮ್ಮ.ಪಾಲು 472 ಕೋಟಿ ರೂ. ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 1528 ಕೋಟಿ ರೂ.ಗಳನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟದಡಿ 594 ಕೋಟಿ ಕೇಂದ್ರ ಕೊಟ್ಟರೆ ರಾಜ್ಯ ಸರ್ಕಾರ 346 ಕೋಟಿ ರೂ. ನೀಡಿ ಹೆಚ್ಚುವರಿಯಾಗಿ 967 ಕೋಟಿ ರೂ.ಗಳನ್ನು ನೀಡಿದೆ. ಆಯುಷ್ಮಾ ನ್ ಭಾರತ್ ಯೋಜನೆಯಡಿ 187 ಕೋಟಿ ರೂ.ಗಳನ್ನು ಕೇಂದ್ರ ನೀಡಿದ್ದರೆ 124 ಕೋಟಿ ರೂ ಜೊತೆಗೆ 624 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದೆ.
ನಮ್ಮ ಗ್ಯಾರಂಟಿ ಕದ್ದಿದ್ದಾರೆ
ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 525 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 350 ಕೋಟಿ ನೀಡಿದೆ ಅದರ ಜೊತೆಗೆ 8569 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಒಟ್ಟಾರೆಯಾಗಿ 13005 ಕೋಟಿ ರೂ.ಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬರುತ್ತದೆ ಅಷ್ಟೇ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಪಿಎಂ ಕೃಷಿ ಸಿಂಚಯಿ ಯೋಜನೆಯಡಿ 57% ಕೇಂದ್ರ ಸರ್ಕಾರ ಹಾಗೂ 33% ರಾಜ್ಯ ಸರ್ಕಾರ ನೀಡುತ್ತದೆ ಅದರ ಜೊತೆ ಶೇ 35 ರಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ನೀಡುತ್ತದೆ . ಪಿ ಎಂ ಆವಾಸ್ ಯೋಜನೆಯಡಿ 5-6 ಲಕ್ಷ ರೂ ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50.ಲಕ್ಷ ರೂ. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಜಿಎಸ್ ಟಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರೂ ಮಾತ್ರ ಎಂದರು. ಇದರಲ್ಲಿ ನಮ್ಮ ಹೆಸರಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಿಎಂ ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದರು.
—ಹೀಗಿದೆವಿಧಾನಪರಿಷತ್ತಿನಲ್ಲಿ ಸಿಎಂ ಸಿದ್ಧರಾಮಯ್ಯ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ—-
ಬೆಂಗಳೂರು, ಫೆಬ್ರವರಿ 29 : ರಾಜ್ಯಕ್ಕೆ 3,71,383 ಕೋಟಿ ರೂ. ಗಾತ್ರದ ಜನಪರ ಬಜೆಟ್ ಮಂಡಿಸುವ ಮೂಲಕ ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
19 ಜನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಬಜೆಟ್ ನ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದು, ಬಂದ ಟೀಕೆ ಹಾಗೂ ಸಲಹೆ ಸೂಚನೆಗಳನ್ನು ನಾನು ತುಂಬುಹೃದಯದಿಂದ ಸ್ವಾಗತಿಸುತ್ತೇನೆ.
7 ಕೋಟಿ ಕನ್ನಡಿಗರ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಲು , ಸಮಾಜದಲ್ಲಿ ಅವಕಾಶದಲ್ಲಿ ವಂಚಿತರಾದ ವರ್ಗದವರಿಗೆ ಶಕ್ತಿ ತುಂಬುವ ಬಜೆಟ್ ನ್ನು ಸರ್ಕಾರ ಮಂಡಿಸಿದೆ ಎಂದರು.
2024-25ಕ್ಕೆ ರಾಜಸ್ವ ವೆಚ್ಚ 2,90,531 ಕೋಟಿ ರೂ. ಬಂಡವಾಳ ವೆಚ್ಚ55,877 ಕೋಟಿ , ಸಾಲ ಮರುಪಾವತಿ 24,974 ಒಳಗೊಂಡಂತೆ ಒಟ್ಟು 3,71,383 ಕೋಟಿ ರೂ.ಗಳ ಆಯವ್ಯಯ ಮಂಡಿಸಿದ್ದೇನೆ. 2002 ರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪ್ರಕಾರ ಜಿಎಸ್ ಡಿಪಿಯ 23.68 % ಇದ್ದು 25% ರ ಮಿತಿಯೊಳಗೆ ಇದೆ. ವಿತ್ತೀಯ ಕೊರತೆ 82,981 ಕೊರತೆ ಇದ್ದು ರಾಜ್ಯದ ಜಿಎಸ್ ಡಿಪಿಯ ಶೇ.2.95 ರಷ್ಟಿದ್ದು, ರಾಜ್ಯದ ವಿತ್ತೀಯ ಕೊರತೆ ಹಾಗೂ ಹೊಣೆಗಾರಿಕೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯೊಳಗೆ ಇದೆ ಎಂದು ವಿವರಿಸಿದರು
ಹಿಂದಿನ ಸರ್ಕಾರಕ್ಕಿಂತ ಬಜೆಟ್ ಗಾತ್ರ ಹೆಚ್ಚಳ
ಬಸವರಾಜ ಬೊಮ್ಮಾಯಿಯವರು ಫೆಬ್ರವರಿ 2023ರಲ್ಲಿ 3,09,182 ಕೋಟಿ ಗಾತ್ರ ಬಜೆಟ್ ಮಂಡಿಸಿದ್ದರು. 2023 ರ ಜುಲೈನಲ್ಲಿ ನಮ್ಮ ಸರ್ಕಾರ 3,27,747 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಿಂತ 62200 ಕೋಟಿ ಯಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023ರಲ್ಲಿ ಮಂಡಿಸಿದ ಬಜೆಟ್ ಗಿಂತ ಇದು 43630 ಕೋಟಿ ರೂ. ಹೆಚ್ಚಳವಾಗಿದೆ ಎಂದರು.
ಬಜೆಟ್ ಗೆ ಜನಮನ್ನಣೆ ದೊರೆತಿದೆ:
ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024-25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ನಮ್ಮ ಬಜೆಟ್ ಜನಪರ ಬಜೆಟ್ , ಅಭಿವೃದ್ಧಿಪರವಾದ ಬಜೆಟ್ ಎಂಬ ಮನ್ನಣೆ ಎಲ್ಲೆಡೆಯಿಂದ ದೊರೆಯುತ್ತಿದೆ ಎಂದರು.
ಬಿಜೆಪಿಯವರು ಶ್ರೀಮಂತರ ಪರವಾಗಿರುವ ಪಕ್ಷ. ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡರೆ ದೇಶ ಭಕ್ತಿ ಬರುತ್ತದೆ ಎಂದುಕೊಂಡಿರುವುದು ಅವರ ತಪ್ಪು ಕಲ್ಪನೆ. ಇವರಿಗೆ ದೇಶದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಸರ್ಕಾರ ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ರಾಜ್ಯದ ಜನರಿಗೆ ಶಕ್ತಿ ತುಂಬುವ ಸಲುವಾಗಿ ಜನಪರ, ಬಡವರ ಪರ ಬಜೆಟ್ ಮಂಡಿಸಿದೆ. ದೇಶದ ಪ್ರಧಾನಿಯವರು ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃಧ್ಧಿ ಕೆಲಸ ಕುಂಟಿತವಾಗುತ್ತವೆ ಎಂದು ಮೂದಲಿಸಿದ್ದರು ಎಂದು ತಿಳಿಸಿದರು.
ನಮ್ಮ ಹೋರಾಟವೇ ಬಿಜೆಪಿ ವಿರುದ್ಧ
ಭಾರತಕ್ಕೆ ಸ್ವಾತಂತ್ರ್ಯ ತಂದಿರುವುದು ಕಾಂಗ್ರೆಸ್ ಪಕ್ಷದವರು. 1942ನೇ ಸಾಲಿನಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುವಾಗ ಬಿಜೆಪಿಯವರು ಎಲ್ಲಿದ್ದರು. ಬಿಜೆಪಿಯವರು ಬ್ರಿಟಿಷ್ ರವರ ಜೊತೆಗೆ ಶಾಮೀಲು ಆಗಿದ್ದರು. ಇವರಿಗೆ ದೇಶದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿಲ್ಲ. ನಮ್ಮ ಹೋರಾಟವೇ ಬಿಜೆಪಿ ವಿರುದ್ಧ. ಕಾಂಗ್ರೆಸ್ ಪಕ್ಷ ಸಂವಿಧಾನ ತಂದುಕೊಟ್ಟ ಮೇಲೆ ಬಿಜೆಪಿಯವರು ಇಲ್ಲಿಗೆ ಬಂದಿದ್ದಾರೆ. ಬಿಜೆಪಿಯವರು ಬಡವರ, ದಿನದಲಿತರ, ಅಲ್ಪಸಂಖ್ಯಾಂತರ ಜನರ ದ್ವೇಷಿಗಳು ಎಂದರು.
ಬಿಜೆಪಿಯವರದು ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ
ಧರ್ಮ ಮತ್ತು ಜಾತಿ ಹೆಸರನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಯವರ ನಾಟಕವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರಿಗೆ ಜನರ ಆರ್ಶೀವಾದ ಮಾಡಿಲ್ಲ. ಹಿಂಬಾಗಿಲು ದಿಂದ ಬಂದು ಅಧಿಕಾರ ಮಾಡುವುದಕ್ಕೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಹಸಿವು ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಹೇಳುವುದನ್ನು ಬಿಟ್ಟು, ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
BREAKING: ಕೊನೆಗೂ ‘ರಾಜ್ಯ ಸರ್ಕಾರ’ಕ್ಕೆ ‘ಜಾತಿಗಣತಿ ವರದಿ’ ಸಲ್ಲಿಸಿದ ‘ಹಿಂದುಳಿದ ಆಯೋಗದ ಅಧ್ಯಕ್ಷ’.!
BREAKING: ಕೊನೆಗೂ ‘ರಾಜ್ಯ ಸರ್ಕಾರ’ಕ್ಕೆ ‘ಜಾತಿಗಣತಿ ವರದಿ’ ಸಲ್ಲಿಸಿದ ‘ಹಿಂದುಳಿದ ಆಯೋಗದ ಅಧ್ಯಕ್ಷ’.!