ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಇಂದು ತಮ್ಮ ದಾಖಲೆಯ 16 ನೇ ರಾಜ್ಯ ಬಜೆಟ್-2025-26 ( Karnataka Budget 2024-25 ) ಅನ್ನು ಮಂಡಿಸುತ್ತಿದ್ದು, ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5267 ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು, ತರ್ಕಬದ್ದಗೊಳಿಸಿ 5000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಗೌರವಧನವನ್ನು 2,000 ರೂ. ಹೆಚ್ಚಳ ಮಾಡಲಾಗುವುದು. ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತರ ಗೌರವಧನ 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 700 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕುವೆಂಪು ಅವರ ಕವನದ ಮೂಲಕ ಬಜೆಟ್ ಮಂಡನೆ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅವರು, 6 ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು, ಗ್ಯಾರಂಟಿ ಯೋಜನೆಗಳ ಇತರ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು. ಈ ಬಾರಿ ಬಜೆಟ್ 4 ಲಕ್ಷ ಕೋಟಿ ರೂ. ಇದೆ. ಕೃಷಿ ಮತ್ತು ಇನ್ನಿತರ ದಾಖಲೀಕರಣ ಸೇರಿದಂತೆ ಗ್ರಾಮೀಣ ಜನರ ಅಭಿವೃದ್ಧಿಗೆ ಶ್ರಮಿಸಲಾಗುವುದು, ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗುವುದು, ನಗರಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿಗೆ ಅನುದಾನ 7 ಸಾವಿರ ಕೋಟಿಗೆ ಏರಿಕೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ ಮಾಡಲಾಗುವುದು, ಬಿಸಿಯೂಟ ಕಾರ್ಯಕರ್ತರಿಗೆ 1 ಸಾವಿರ ರೂ. ಗೌರವಧನ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ 6 ದಿನಕ್ಕೆ ವಿಸ್ತರಣೆ ಮಾಡಲಾಗುವುದು, 100 ಪ್ರಾಥಮಿಕ, 50 ಪ್ರೌಢಶಾಲೆಗಳ ಉನ್ನತೀಕರಣ, 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
1080 ಕೋಟಿ ರೂ.ವೆಚ್ಚದಲ್ಲಿ ವೃಷಭಾವತಿ ವ್ಯಾಲಿ ಯೋಜನೆ ಜಾರಿಗೆ ತರಲಾಗುವುದು. ಮೊದಲ ಹಂತದಲ್ಲಿ 70 ಕೆರೆ ತುಂಬಿಸುವ ಯೋಜನೆ. ಎತ್ತಿನಹೊಳೆಗೆ ಯೋಜನೆಗೆ 553 ಕೋಟಿ ರೂ. ಯೋಜನೆ ಜಾರಿ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಜಾರಿ, 2 ಕೋಟಿ ರೂ.ವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ಘೋಷಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಯೋಜನೆ ಜಾರಿಗೊಳಿಸಲಾಗುವುದು, ಅನುಗ್ರಹ ಯೋಜನೆಯಡಿ ಜಾನುವಾರುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಮೊತ್ತವನ್ನು 15,000 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದ್ದು, ರಾಜ್ಯದಲ್ಲಿ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, 40 ಸಾವಿರ ಕೋಟಿ ಆದಾಯದ ಗುರಿ ಹೊಂದಿದೆ. ಇನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮಿ ಫಲಾನುಭವಿಗಳನ್ನು ಅಕ್ಕ ಕೋ ಅಪರೇಟಿವ್ ಸೊಸೈಟ್ ಅಡಿ ತರಲಾಗುವುದು ಎಂದು ತಿಳಿಸಿದ್ದಾರೆ.