Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
Budget (2)

BUDGET BREAKING : ಯುವನಿಧಿ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ!

06/03/2026 11:41 AM
Budget (2)

BUDGET BREAKING : `ರೈತರಿಗೆ ಬಂಪರ್’ ಘೋಷಣೆ : ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 11:40 AM

ಹಳೆ ಫೋಟೋ ಡಿಲೀಟ್ ಮಾಡದಿದ್ದಕ್ಕೆ ದ್ವೇಷ: ಪತಿಯೊಂದಿಗೆ ಸೇರಿ ಮಾಜಿ ಲಿವ್-ಇನ್ ಪಾರ್ಟ್ನರ್‌ನನ್ನೇ ಸುಟ್ಟು ಹಾಕಿದ ಮಹಿಳೆ!

06/03/2026 11:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BUDGET BREAKING : `ರೈತರಿಗೆ ಬಂಪರ್’ ಘೋಷಣೆ : ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ
KARNATAKA

BUDGET BREAKING : `ರೈತರಿಗೆ ಬಂಪರ್’ ಘೋಷಣೆ : ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5706/03/2026 11:40 AM
Budget (2)
Budget (2)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಬಜೆಟ್‌ ಅನ್ನು ಇಂದು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಆಯವ್ಯಯವಾಗಿದ್ದು, ಈ ಬಾರಿಯ ಒಟ್ಟು ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ.ಗಳಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಉದ್ಯೋಗ, ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಭರ್ಜರಿ ಕೊಡುಗೆ ನೀಡಲಾಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಕಡಿವಾಣ ಹಾಕುವ ಅತ್ಯಂತ ಮಹತ್ವದ ಹಾಗೂ ದಿಟ್ಟ ನಿರ್ಧಾರವನ್ನು ಪ್ರಕಟಿಸಲಾಗಿದೆ.

ಬಜೆಟ್‌ನ ಪ್ರಮುಖ ಹೈಲೈಟ್ಸ್:

ರೈತರಿಗೆ ಬಂಪರ್ ಘೋಷಣೆ: ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಅನ್ನದಾತರಿಗೆ ಹಲವು ಹೊಸ ಯೋಜನೆಗಳನ್ನು ಸಿಎಂ ಘೋಷಣೆ ಮಾಡಿದ್ದಾರೆ. ರೈತರ ಆರ್ಥಿಕ ಸಬಲೀಕರಣ ಹಾಗೂ ಕೃಷಿ ಅಭಿವೃದ್ಧಿಗೆ ಪೂರಕವಾದ ಮಹತ್ವದ ಯೋಜನೆಗಳು ಇದರಲ್ಲಿ ಸೇರಿವೆ.

ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳು ಇನ್ಮುಂದೆ ಸಾಮಾಜಿಕ ಮಾಧ್ಯಮ (Social Media) ಬಳಸುವಂತಿಲ್ಲ ಎಂಬ ಕ್ರಾಂತಿಕಾರಿ ನಿರ್ಧಾರವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮಕ್ಕಳ ಭವಿಷ್ಯ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಈ ದಿಟ್ಟ ಹೆಜ್ಜೆ ಇಡಲಾಗಿದೆ.

ಉದ್ಯೋಗ ಮತ್ತು ಸಾಹಿತ್ಯಕ್ಕೆ ಒತ್ತು: ಕೃಷಿ ವಲಯದ ಜೊತೆಗೆ, ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳು ಹಾಗೂ ರಾಜ್ಯದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೂ ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ.

ದಾಖಲೆಯ ಬಜೆಟ್: 4.48 ಲಕ್ಷ ಕೋಟಿ ರೂ. ಗಾತ್ರದ ಈ ಬಜೆಟ್, ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗುವ ನಿರೀಕ್ಷೆಯಿದೆ.

ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ʻರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧವಾಗುತ್ತದೆʼ ಎಂಬ ದೃಢ ನಂಬಿಕೆಯಿಂದ ಪ್ರೇರಿತವಾಗಿ ನಮ್ಮ ಸರ್ಕಾರವು ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ನಾಲ್ಕು ಆಧಾರಸ್ತಂಭಗಳ ಮೇಲೆ ಕೃಷಿ ಅಭಿವೃದ್ಧಿ ತಂತ್ರವನ್ನು ರೂಪಿಸಿದೆ. ಮೊದಲನೆಯ ಆಧಾರಸ್ತಂಭ ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ, ಎರಡನೆಯದು ರೈತರಿಗೆ ಹಣಕಾಸು ನೆರವು, ಮೂರನೆಯದು ಉತ್ತಮ ಗುಣಮಟ್ಟದ ಕೃಷಿಪರಿಕರಗಳನ್ನು ಒದಗಿಸುವುದು ಮತ್ತು ಬೆಳೆಗಳ ನಿರ್ವಹಣೆ ಹಾಗೂ ನಾಲ್ಕನೆಯದು ಕೊಯ್ಲೋತ್ತರ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ. ಇದರಿಂದ ಪ್ರತಿಯೊಬ್ಬ ರೈತರ ಸಮೃದ್ಧಿ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸರ್ಕಾರ ದೃಢಸಂಕಲ್ಪ ತೊಟ್ಟಿದೆ.

36. ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರ್ಕಾರವು ರೈತರ ಅಭ್ಯುದಯಕ್ಕಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ.

• 40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ.
• 2,825 ಕೋಟಿ ವೆಚ್ಚ ಭರಿಸಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ.
• 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ.
• 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ.
• 36 ಲಕ್ಷ ನೀರಾವರಿ ಪಂಪ್ಸೆಟ್ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್ ಸಹಾಯಧನ.
• 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ.

37. ಉತ್ಪಾದನೋತ್ತರ ಕೃಷಿ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಸಮಗ್ರವಾಗಿ ಬಲಪಡಿಸುವ ಮೂಲಕ ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

38. ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ʻಮಿಲೆಟ್ ಹಬ್ʼ ಅನ್ನು ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸಲಾಗುವುದು.

39. ರೈತರಿಗೆ ಮಣ್ಣು, ನೀರು, ಬೀಜ ಹಾಗೂ ರಸಗೊಬ್ಬರ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶಗಳನ್ನು ಒದಗಿಸಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಇಲಾಖೆಯ ಎಲ್ಲಾ ಪ್ರಯೋಗಾಲಯಗಳಿಗೆ NABL ಮಾನ್ಯತೆ ಪಡೆದು ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಪರೀಕ್ಷಣಾ ಸೇವೆಗಳನ್ನು ಒದಗಿಸಲಾಗುವುದು.

40. ನೂತನ ದ್ವಿದಳಧಾನ್ಯ ತಳಿಗಳ ಬಿತ್ತನೆ ಬೀಜಗಳ ಬಳಕೆಯನ್ನು ರೈತರಲ್ಲಿ ಪ್ರೇರೇಪಿಸಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಲಾಗುವುದು.

41. ಮಣ್ಣಿನ ಸಾವಯವ ಇಂಗಾಲ ಹಾಗೂ ಅದರ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತʼ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು.

42. ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಇವುಗಳನ್ನು  ನಿಯಂತ್ರಿಸಲು ಅಗತ್ಯವಿರುವ ಪರಿಸರ ಸ್ನೇಹಿ ಜೈವಿಕ ಪೀಡೆನಾಶಕ/ಜೈವಿಕ ಕೀಟನಾಶಕಗಳ  ಜೊತೆ ಇತರೆ  ಸುರಕ್ಷಿತ ನಿರ್ವಹಣಾ ಕ್ರಮಗಳ ಶಿಫಾರಸ್ಸುಗಳನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.

43. ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ʻರೈತ ಕರೆ ಕೇಂದ್ರʼವನ್ನು
AI ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು.

44. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼ ವನ್ನಾಗಿ ಉನ್ನತೀಕರಿಸಲಾಗುವುದು.

45. ಕೃಷಿ ಚಟುವಟಿಕೆಯಲ್ಲಿ ರೈತರ ಸಮಯ ಹಾಗೂ ಶ್ರಮ ತಗ್ಗಿಸುವುದರೊಂದಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ
ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೊಳಿಸಲಾಗುವುದು.

46. ಕೃಷಿ ಸಂಬಂಧಿತ ಕಸುಬುಗಳನ್ನು ಮತ್ತು ಸ್ಥಳೀಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು.

47. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.

48. ಹವಾಮಾನ ಬದಲಾವಣೆಗೆ ಹೊಂದಾಣಿಕೆ ಹಾಗೂ ತಗ್ಗಿಸುವಿಕೆಯ ರಾಜ್ಯದ ಪ್ರಯತ್ನಗಳನ್ನು ಬಲಪಡಿಸಿ ಕೃಷಿಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿಸಲು ಭತ್ತದ ಕೃಷಿಯಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಪರ್ಯಾಯ ತೇವ–ಒಣಗಿಸುವ (Alternate Wetting & Drying) ವಿಧಾನಗಳನ್ನು ಉತ್ತೇಜಿಸಲಾಗುವುದು.

49. ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗಿಸುವುದರ ಜೊತೆಗೆ ಮಾರುಕಟ್ಟೆಯ ಅನಿಶ್ಚಿತತೆಯನ್ನು ನಿವಾರಿಸುವ ಉದ್ದೇಶದಿಂದ ಬಿತ್ತನೆ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳು ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ MSIL ವತಿಯಿಂದ ರೈತ ಮಾಲ್ಗಳನ್ನು ಸ್ಥಾಪಿಸಲಾಗುವುದು.

50. ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು.

51. ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಅಥಣಿಯಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಒದಗಿಸಲಾಗುವುದು.

ತೋಟಗಾರಿಕೆ
52. ತೋಟಗಾರಿಕೆಯನ್ನು ರೈತರ ಆದಾಯ ವೃದ್ಧಿಯ ಪ್ರಮುಖ ಇಂಜಿನ್ ಆಗಿ ರೂಪಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಉತ್ಕೃಷ್ಟ ಗುಣಮಟ್ಟ, ಅಧಿಕ ಮೌಲ್ಯದ, ಹವಾಮಾನ
ಸ್ಥಿತಿ-ಸ್ಥಾಪಕ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿದೆ:

• ಹೊಸದಾಗಿ 89,000 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೇಸಾಯ ಅಳವಡಿಕೆ;
• 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ಅಳವಡಿಸಿ 2.36 ಲಕ್ಷ ರೈತರಿಗೆ ಅನುಕೂಲ;
• ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ 2,378 ಕೋಟಿ ರೂ.ಗಳ ಬೆಳೆ ವಿಮೆ ಪರಿಹಾರ;
• 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳ ನಿರ್ಮಾಣ.

53. ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿ ಲಭ್ಯವಿರುವ ಜಮೀನನ್ನು ಉಪಯೋಗಿಸಿ ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು PPP ಮಾದರಿಯಲ್ಲಿ ಸ್ಥಾಪಿಸಲಾಗುವುದು.

54. ಅಡಿಕೆ ಬೆಳೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ಮತ್ತು ತೆಂಗು ಬೆಳೆಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು 10 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು.

55. ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಶೀತಲಗೃಹಗಳನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು.

56. ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.

57. ನೀರಿನ ಸಂರಕ್ಷಣೆ ಮತ್ತು ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಲು ಹೈಡ್ರೋಪೊನಿಕ್ಸ್ (Hydroponics) ಹಾಗೂ ಕೋಕೋಪೀಟ್ (Coco peat) ಆಧಾರಿತ ಮಣ್ಣಿಲ್ಲದ ಕೃಷಿಯನ್ನು ಪ್ರೋತ್ಸಾಹಿಸಲಾಗುವುದು.

58. ತಜ್ಞರ ಕಾರ್ಯಸಾಧ್ಯತಾ ವರದಿಯ ಶಿಫಾರಸ್ಸಿನಂತೆ ಡಂಬಳದಲ್ಲಿ ತೋಟಗಾರಿಕೆ ಕಾಲೇಜನ್ನು ಸ್ಥಾಪಿಸಲು ಅಗತ್ಯವಿರುವ ಪ್ರಥಮ ಹಂತದ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ರೇಷ್ಮೆ

59. ಭಾರತದ ರೇಷ್ಮೆ ಉತ್ಪಾದನೆಯಲ್ಲಿ ಶೇ.46 ರಷ್ಟು ಪಾಲು ಹೊಂದಿರುವ ಕರ್ನಾಟಕವು ದೇಶದ ರೇಷ್ಮೆ ರಾಜಧಾನಿಯಾಗಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ರೀಲಿಂಗ್ ಶೆಡ್ ನಿರ್ಮಾಣ, ಹನಿ ನೀರಾವರಿ ಘಟಕ ಮುಂತಾದ ಚಟುವಟಿಕೆಗಳಿಗೆ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಮೊತ್ತದ ಸಹಾಯಧನವನ್ನು 2 ಲಕ್ಷ ಫಲಾನುಭವಿಗಳಿಗೆ ಒದಗಿಸಲಾಗಿದೆ

60. ಪ್ರಮುಖ 15 ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ, ಡಿಜಿಟಲ್ ವಹಿವಾಟು, ಇ-ಹರಾಜು, ಇ-ಪೇಮೆಂಟ್ ಮತ್ತು ಇ-ಪಾವತಿ ವ್ಯವಸ್ಥೆಯನ್ನು ಆರಂಭಿಸಿದ ದೇಶದ ಮೊದಲ ಮತ್ತು ಏಕೈಕ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ.

61. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ಇರುವ 10 ರೂ. ಸಾಗಾಣಿಕಾ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗುವುದು.

62. ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು.

63. ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಪಶು ಸಂಗೋಪನೆ

64. ನಮ್ಮ ಸರ್ಕಾರದ ಪ್ರಾರಂಭದ ಅವಧಿಯಲ್ಲಿ ಪ್ರತಿದಿನ 8.75 ಲಕ್ಷ ಹಾಲು ಉತ್ಪಾದಕರಿಂದ 81.78 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿತ್ತು. ಪ್ರಸ್ತುತ ಪ್ರತಿದಿನ 9.07 ಲಕ್ಷ ಹಾಲು ಉತ್ಪಾದಕರಿಂದ ಸರಾಸರಿ ಒಂದು ಕೋಟಿ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಪೂರೈಕೆದಾರರಿಗೆ ಬಾಕಿ ಇದ್ದ 609 ಕೋಟಿ ರೂ. ಪ್ರೋತ್ಸಾಹಧನವನ್ನು ಒಳಗೊಂಡಂತೆ, ಇದುವರೆಗೂ ಒಟ್ಟಾರೆ 4,523 ಕೋಟಿ ರೂ. ಪ್ರೋತ್ಸಾಹಧನವನ್ನು ನೀಡಲಾಗಿದೆ.

65. ಅನುಗ್ರಹ ಯೋಜನೆಯಡಿ ಕುರಿ/ಮೇಕೆಗಳ ಮತ್ತು ರಾಸುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಧನವನ್ನು ಹೆಚ್ಚಿಸಿ, ಇದುವರೆಗೂ 1.70 ಲಕ್ಷ ಫಲಾನುಭವಿಗಳಿಗೆ 101 ಕೋಟಿ ರೂ. ವಿತರಿಸಲಾಗಿದೆ.

66. ʻಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ (ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಅಧಿನಿಯಮ, 2025ʼ ನ್ನು ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 6,702 ಕುರಿಗಾಹಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.

67. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 300 ಪಶುವೈದ್ಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. 2026-27ನೇ ಸಾಲಿನಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸದಾಗಿ 100 ಕಟ್ಟಡಗಳನ್ನು ನಿರ್ಮಿಸಲಾಗುವುದು.

68. ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಕುರಿ/ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ರಷ್ಟು ಸಹಾಯಧನದಲ್ಲಿ ಹಸು/ಎಮ್ಮೆ ಖರೀದಿಸಲು ಪ್ರೋತ್ಸಾಹಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಳಿಗೆ ಒಟ್ಟು 40 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.

69. ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ವಿಶೇಷ ಸೇವೆ ವ್ಯವಸ್ಥೆಯನ್ನು ತಾಲ್ಲೂಕು ಹಂತಕ್ಕೆ ವಿಸ್ತರಿಸಲು 20 ತಾಲ್ಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 15 ತಾಲ್ಲೂಕು ಪಶು ಆಸ್ಪತ್ರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.

70. ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಬಂಡೂರು ಕುರಿ ತಳಿ ಸಂವರ್ಧನಾ ಕೇಂದ್ರದ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.

71. ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿವಾರಿಸಲು ʻವರ್ಷಕ್ಕೊಂದು ಕರುʼ ಎಂಬ ಘೋಷವಾಕ್ಯದೊಂದಿಗೆ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ ʻಫಲಧಾರೆʼ ಶಿಬಿರಗಳನ್ನು ಐದು ಕೋಟಿ ರೂ. ವೆಚ್ಚದಲ್ಲಿ ಏರ್ಪಡಿಸಲಾಗುವುದು.

72. ಪಶುಗಳಲ್ಲಿನ ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಹಾಗೂ ಬೀದರ್ನ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

73. ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರೋಪಾಯವಾಗಿ ಸಂತಾನಹರಣ ನಿಯಂತ್ರಣವನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜಾರಿಗೆ ತರುವ ಉದ್ದೇಶದಿಂದ ಪಶುವೈದ್ಯರು ಮತ್ತು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡಲು ಬೆಂಗಳೂರು ಹಾಗೂ ಬೀದರ್ ನಲ್ಲಿ ʻಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರʼವನ್ನು ಸ್ಥಾಪಿಸಲಾಗುವುದು.

ಮೀನುಗಾರಿಕೆ

74. ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್ ಮೌಲ್ಯದ ದರವನ್ನು 10,000 ರೂ.ಗಳಿಂದ 20,000 ರೂ.ಗಳಿಗೆ  ಹೆಚ್ಚಿಸಿ ಮೀನುಗಾರಿಕೆ ಚಟುವಟಿಕೆಗಳನ್ನು ಉತ್ತೇಜಿಸಲಾಗುವುದು.

75. ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು (Mariculture) ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ Centre of Excellence ಸ್ಥಾಪಿಸಲಾಗುವುದು.

76. ಮೀನು ಆಹಾರದ ಸೇವನೆಯನ್ನು ಉತ್ತೇಜಿಸುವ ಹಾಗೂ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಗುಣಮಟ್ಟದ ಮೀನು ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳನ್ನು ಸ್ಥಾಪಿಸಲಾಗುವುದು.

77. ಮೀನು ಮಾರಾಟ ಮಾಡಲು ಸುಸಜ್ಜಿತ ಮೀನು ಮಾರುಕಟ್ಟೆಗಳ ಅವಶ್ಯಕತೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು.

78. ರಾಜ್ಯದಲ್ಲಿ ಮೀನುಗಾರಿಕೆ ಕೊಂಡಿ ರಸ್ತೆಗಳ ನಿರ್ವಹಣೆಗಾಗಿ 20 ಕೋಟಿ ರೂ.ಗಳನ್ನು ಒದಗಿಸಲಾಗುವುದು.

79. ಒಳನಾಡು ಮೀನುಗಾರಿಕೆಯು ಗ್ರಾಮೀಣ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಮಹತ್ವವಾಗಿದೆ. ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ನದಿ, ಕೆರೆ, ಕೃಷಿ ಹೊಂಡ ಹಾಗೂ ಜಲಾಶಯಗಳಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಮೀನುಗಾರರಿಗೆ ತರಬೇತಿ ನೀಡಿ ಸ್ಥಿರ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲಾಗುವುದು.

ಸಹಕಾರ

80. 2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿ ಹೊಂದಲಾಗಿದ್ದು, ಫೆಬ್ರವರಿ 2026ರ ಅಂತ್ಯಕ್ಕೆ 25 ಲಕ್ಷ ರೈತರಿಗೆ 22,000 ಕೋಟಿ ರೂ. ಕೃಷಿ ಸಾಲವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ.

81. ಯಶಸ್ವಿನಿ ಯೋಜನೆಯಡಿ ಇದುವರೆಗೆ ರಾಜ್ಯಾದ್ಯಂತ 870 ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ 86,253 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದು, ಇದಕ್ಕಾಗಿ 163 ಕೋಟಿ ರೂ.ಗಳನ್ನು ಭರಿಸಲಾಗಿದೆ.

82. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 3,863 PACS ಗಳು Go-Live ಆಗಿದ್ದು, Online ಸೇವೆಯನ್ನು ಒದಗಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದ 1,628 ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.

83. ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್ಲೈನ್ನಲ್ಲಿ ನಿರ್ವಹಿಸಲು ಕ್ರಮವಹಿಸಲಾಗುವುದು.

84. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ಮೆಕ್ಕೆಜೋಳದ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದ ರೈತರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ನಮ್ಮ ಸರ್ಕಾರ 100 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.

85. ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಿಗಮದ ಅನುಪಯುಕ್ತ ಆಸ್ತಿಗಳನ್ನು ನಗದೀಕರಣಗೊಳಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್)  ಮತ್ತು ಹುಬ್ಬಳ್ಳಿ (ಕಾಟನ್ ಮಾರ್ಕೆಟ್)  ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುವುದು.

86. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ digitize ಮಾಡಲು 10 ಕೋಟಿ ರೂ. ವೆಚ್ಚದಲ್ಲಿ ERP (Enterprise Resource Planning) ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.

87. ನಬಾರ್ಡ್ ಸಂಸ್ಥೆಯ ಸಲಹೆಯಂತೆ ಪ್ರತಿ ಜಿಲ್ಲೆಯಲ್ಲಿ ʻಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ʼ ಸ್ಥಾಪಿಸಲು RBI ಗೆ ಪ್ರಸ್ತಾವನೆ ಸಲ್ಲಿಸಲಾಗುವುದು.

ಜಲಸಂಪನ್ಮೂಲ

“ನದಿಗಳು ನಮ್ಮೆಲ್ಲ ಮಾನವ ಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ”
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ

88. ಕರ್ನಾಟಕದ ಬಹು ನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ, ತಮಿಳುನಾಡು ರಾಜ್ಯವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ತಕರಾರು ಅರ್ಜಿಗಳು ವಜಾಗೊಂಡಿರುವುದು ಕರ್ನಾಟಕಕ್ಕೆ ಮಹತ್ವದ ಕಾನೂನು ಜಯವಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ, ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

89. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೇ ಹಂತದ ಏತ ನೀರಾವರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು.

90. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಒದಗಿಸುವ ಬಗ್ಗೆ ಕೇಂದ್ರ ಸರ್ಕಾರದ 2023-24ರ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರೂ ಸಹ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಆದರೂ, ರಾಜ್ಯ ಸರ್ಕಾರದ ವತಿಯಿಂದ ಈ ಯೋಜನೆಗೆ
11,343 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ. ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಭೂಸಮಸ್ಯೆಯನ್ನು ಬಗೆಹರಿಸಲಾಗಿದೆ. ಇದರಿಂದಾಗಿ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಇದರಡಿ ಬರುವ ಫೀಡರ್ ಕಾಮಗಾರಿಗಳನ್ನು 2027ನೇ ಸಾಲಿನಲ್ಲಿ ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲಾಗುವುದು.

91. ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ UKP Stage-III ಯೋಜನೆಯಡಿ ಆಲಮಟ್ಟಿ ಅಣೆಕಟ್ಟನ್ನು 519.6 ಮೀ. ಯಿಂದ 524.256 ಮೀ. ಗೆ ಎತ್ತರಿಸುವ ಕಾಮಗಾರಿಯಿಂದ ಮುಳುಗಡೆಯಾಗುವ ಜಮೀನುಗಳು ಹಾಗೂ ನೀರಾವರಿ ಕಾಲುವೆ ಜಾಲಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಮತ್ತು ಸಂತ್ರಸ್ತರ ದೀರ್ಘಕಾಲದ ಬೇಡಿಕೆಗೆ ನಮ್ಮ ಸರ್ಕಾರ ಸ್ಪಂದಿಸಿ ಪರಿಷ್ಕೃತ ಒಪ್ಪಂದದ ದರಗಳನ್ನು ಅನುಮೋದಿಸಿದೆ. ಮುಳುಗಡೆಗೊಳ್ಳುವ ಖುಷ್ಕಿ ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದೆ. ಒಪ್ಪಂದದ ಐತೀರ್ಪುಗಳ ಮುಖಾಂತರ ಜಮೀನನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸಲಾಗುವುದು.

92. ತುಂಗಭದ್ರಾ ಅಣೆಕಟ್ಟಿನ ಶಿಥಿಲಗೊಂಡಿರುವ 33 ಗೇಟುಗಳನ್ನು ಬದಲಾಯಿಸಿ ಹೊಸ ಗೇಟುಗಳ ಅಳವಡಿಕೆಯನ್ನು ಮುಂಗಾರು ಪೂರ್ವದಲ್ಲಿ ಪೂರ್ಣಗೊಳಿಸಲಾಗುವುದು. ಮುಂದುವರೆದು, ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಶೇಖರಣೆಯಿಂದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಸೇರಿದಂತೆ ಇತರೆ ಪರ್ಯಾಯ ಮಾರ್ಗೋಪಾಯಗಳ ಕುರಿತು ಈಗಾಗಲೇ ಚಿಂತಿಸಲಾಗಿದೆ. ಇವುಗಳಲ್ಲಿ ಸಮಯೋಚಿತ ಪರ್ಯಾಯ ಮಾರ್ಗದ ಕುರಿತು ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ತುಂಗಭದ್ರಾ ಮಂಡಳಿಯ ಸಹಮತಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ತೀವ್ರತರವಾಗಿ ಪ್ರಯತ್ನಿಸಲಾಗುವುದು.

93. ಮಹದಾಯಿ ಕಣಿವೆಯ ಕಳಸಾ-ಬಂಡೂರಾ ನಾಲಾ ಯೋಜನೆಗಳಡಿ ಅರಣ್ಯ ತೀರುವಳಿ ಪಡೆಯಲು ರಾಜ್ಯ ಸರ್ಕಾರವು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಎರಡು ವರ್ಷಗಳಿಂದ ನಿರಂತರ ಪ್ರಯತ್ನಿಸಿದ್ದರೂ, ಈವರೆಗೆ ತೀರುವಳಿ ಲಭಿಸಿರುವುದಿಲ್ಲ. ಈ ಯೋಜನೆಗಳಿಗೆ ಈಗಾಗಲೇ ಗುತ್ತಿಗೆ ವಹಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅರಣ್ಯ ತೀರುವಳಿ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ಈ ವಿಳಂಬದಿಂದ ರಾಜ್ಯ ಸರ್ಕಾರದ ಹೊರೆ ಹೆಚ್ಚಾಗುತ್ತಿದೆ.

94. ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಅಂತರ್ಜಲ ಹೆಚ್ಚಿಸಿ ಕುಡಿಯುವ ನೀರು ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ಉಡುತೊರೆಹಳ್ಳ ಯೋಜನೆಯನ್ನು 490 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗುವುದು.

95. ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ತಾತ್ವಿಕ ಅನುಮೋದನೆ ನೀಡಲಾಗುವುದು.

96. ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳಡಿ ಪೂರ್ಣಗೊಳ್ಳುವ ಹಂತದಲ್ಲಿನ 12 ನೀರಾವರಿ ಯೋಜನೆಗಳು, 22 ಕೆರೆ ತುಂಬುವ ಯೋಜನೆಗಳು ಮತ್ತು ಮೂರು ಆಧುನೀಕರಣ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ 1.16 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೧ರಲ್ಲಿ ಲಗತ್ತಿಸಿದೆ.

97. ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ 8,045 ಕೋಟಿ ರೂ. ಮೊತ್ತದ 75 ನೀರಾವರಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಗಳ ಪಟ್ಟಿಯನ್ನು ಅನುಬಂಧ-೨ರಲ್ಲಿ ಲಗತ್ತಿಸಿದೆ.

98. ರಾಜ್ಯದ ಕಾಡಾ ಪ್ರಾಧಿಕಾರದಡಿ ಹತ್ತಿಕುಣಿ ಹಾಗೂ ತುಂಗಭದ್ರಾ ಎಡದಂಡೆ ಶಾಖಾ ಕಾಲುವೆಯಡಿ ಬರುವ 4,745 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ Pressurised Piped Network ಪದ್ಧತಿಯನ್ನು ಅಳವಡಿಸಿ ನೀರಾವರಿ ವ್ಯವಸ್ಥೆಯನ್ನು ಆಧುನೀಕರಿಸಲಾಗುವುದು.

ಸಣ್ಣ ನೀರಾವರಿ

99. ಹೆಬ್ಬಾಳ-ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲ್ಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲ್ಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ
164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 237 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.

100. ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಹೆಚ್.ಎನ್ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯನ್ನು 140 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.

101. ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂ.ಎಲ್.ಡಿ. ನೀರಿನಿಂದ 259 ಕೆರೆಗಳನ್ನು ತುಂಬಿಸುವ ಮೂಲ ಯೋಜನೆಯ ಪೈಕಿ ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ೧೧೯ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು 650 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.

102. 2025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏತ ನೀರಾವರಿ, ಚೆಕ್ ಡ್ಯಾಂ, ಕೆರೆಗಳ ಪುನಃಶ್ಚೇತನ ಅಭಿವೃದ್ಧಿ ಮುಂತಾದ 112 ಕಾಮಗಾರಿಗಳನ್ನು 1,793 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಿದೆ. (ಅನುಬಂಧ-3)

103. ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿಸಲು ಕೆರೆ ಬಳಕೆದಾರರ ಸಂಘಗಳನ್ನು ಬಲವರ್ಧನೆಗೊಳಿಸಲಾಗುವುದು.

104. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜಿಡಗಾದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಂತರ್ಜಲ ಹೆಚ್ಚಿಸಲು ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕ್-ಅಪ್ ಹಾಗೂ ಚೆಕ್ಡ್ಯಾಂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

BUDGET BREAKING: `Bumper for farmers' announcement: What did agriculture get in the budget? Here is the complete information
Share. Facebook Twitter LinkedIn WhatsApp Email

Related Posts

Budget (2)

BUDGET BREAKING : ಯುವನಿಧಿ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ!

06/03/2026 11:41 AM3 Mins Read
Budget (2)

BUDGET BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ದರ ಏರಿಕೆ ಕುರಿತು ಸುಳಿವು ನೀಡಿದ ರಾಜ್ಯ ಸರ್ಕಾರ!

06/03/2026 11:32 AM3 Mins Read
Budget (2)

BUDGET BREAKING :ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಏಕರೂಪ ಅಬಕಾರಿ ಸುಂಕ ಹೆಚ್ಚಳಕ್ಕೆ ತೀರ್ಮಾನ !

06/03/2026 11:32 AM2 Mins Read
Recent News
Budget (2)

BUDGET BREAKING : ಯುವನಿಧಿ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ!

06/03/2026 11:41 AM
Budget (2)

BUDGET BREAKING : `ರೈತರಿಗೆ ಬಂಪರ್’ ಘೋಷಣೆ : ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 11:40 AM

ಹಳೆ ಫೋಟೋ ಡಿಲೀಟ್ ಮಾಡದಿದ್ದಕ್ಕೆ ದ್ವೇಷ: ಪತಿಯೊಂದಿಗೆ ಸೇರಿ ಮಾಜಿ ಲಿವ್-ಇನ್ ಪಾರ್ಟ್ನರ್‌ನನ್ನೇ ಸುಟ್ಟು ಹಾಕಿದ ಮಹಿಳೆ!

06/03/2026 11:32 AM
Budget (2)

BUDGET BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ದರ ಏರಿಕೆ ಕುರಿತು ಸುಳಿವು ನೀಡಿದ ರಾಜ್ಯ ಸರ್ಕಾರ!

06/03/2026 11:32 AM
State News
Budget (2) KARNATAKA

BUDGET BREAKING : ಯುವನಿಧಿ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳಿಗೆ ಬಜೆಟ್ ನಲ್ಲಿ ಅನುದಾನ ಘೋಷಣೆ!

By kannadanewsnow0506/03/2026 11:41 AM KARNATAKA 3 Mins Read

ಬೆಂಗಳೂರು : ಸಿಎಂ ಸಿದ್ಧರಾಮಯ್ಯ ಅವರು ರಾಜ್ಯ ಬಜೆಟ್ 2026ಕ್ಕೆ ಮಂಡನೆಗೆ ಪೂರ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ರಾಜ್ಯ ಸಚಿವ ಸಂಪುಟ…

Budget (2)

BUDGET BREAKING : `ರೈತರಿಗೆ ಬಂಪರ್’ ಘೋಷಣೆ : ಬಜೆಟ್ ನಲ್ಲಿ ಕೃಷಿಗೆ ಸಿಕ್ಕಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

06/03/2026 11:40 AM
Budget (2)

BUDGET BREAKING : ಮದ್ಯ ಪ್ರೀಯರಿಗೆ ಬಿಗ್ ಶಾಕ್ : ದರ ಏರಿಕೆ ಕುರಿತು ಸುಳಿವು ನೀಡಿದ ರಾಜ್ಯ ಸರ್ಕಾರ!

06/03/2026 11:32 AM
Budget (2)

BUDGET BREAKING :ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಏಕರೂಪ ಅಬಕಾರಿ ಸುಂಕ ಹೆಚ್ಚಳಕ್ಕೆ ತೀರ್ಮಾನ !

06/03/2026 11:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.