ಬೆಂಗಳೂರು: ನಗರದಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬೋದಕ್ಕೆ ಕೊಂಡೊಯ್ಯುತ್ತಿದ್ದಂತ ವಾಹನವನ್ನು ಅಡ್ಡಗಟ್ಟಿ ಆರ್ ಬಿ ಐ ಅಧಿಕಾರಿಗಳೆಂದು ಪರಿಶೀಲನೆ ನೆಪದಲ್ಲಿ 7.11 ಕೋಟಿ ಹಣವನ್ನು ತಮ್ಮ ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವಂತ ಜಯದೇವ ಡೈರಿ ಸರ್ಕಲ್ ನಲ್ಲಿ ಈ ಬೆಚ್ಚಿ ಬೀಳಿಸೋ ರಾಬರಿ ನಡೆದಿದೆ. 7 ರಿಂದ 8 ಮಂದಿ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ತಾವು ಆರ್ ಬಿಐ ಅಧಿಕಾರಿಗಳು ಎಂಬುದಾಗಿ ವಾಹನ ಅಡ್ಡಗಟ್ಟಿದ್ದಾರೆ. ವಾಹನ ಪರಿಶೀಲನೆಗೆ ಇಳಿದಿದ್ದಾರೆ.
ಆ ಬಳಿಕ ಎಟಿಎಂ ವಾಹನದ ಸಿಬ್ಬಂದಿಗಳನ್ನು ಬೆದರಿಸಿ ಅವರ ವಾಹನದಲ್ಲಿದ್ದಂತ 7.11 ಕೋಟಿ ಹಣವನ್ನು ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಸ್ಥಳದಿಂದ ಕಾಲ್ ಕಿತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಜಯನಗರ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಂತ ಜಯನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸುವ ಸಲುವಾಗಿ ಸಿಎಂಎಸ್ ವಾಹನದ ಚಾಲಕನನ್ನು ತಮ್ಮ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.








