ಮೈಸೂರು: ಕಾಂಗ್ರೆಸ್ ಸರಕಾರದಲ್ಲಿ ಮನೆ ಹಂಚಿಕೆಯಲ್ಲಿಯೂ ಲಂಚ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಲಂಚದ ಪ್ರಮಾಣ ಶೇ.60 ತಲುಪಿದೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ಕಾಂಗ್ರೆಸ್ ಸರಕಾರದಲ್ಲಿ ಶೇ.60 ರಷ್ಟು ಲಂಚ, ಕಮೀಶನ್ ವಸೂಲಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದರು.
ಬಡವರಿಗೆ ಮನೆ ಹಂಚಿಕೆಯಲ್ಲೂ ಲಂಚ ಹೊಡೆಯಲಾಗುತ್ತಿದೆ. ಮೊದಲು ಪಿಡಿಒ ಲಂಚ ಪಡೆಯುತ್ತಿದ್ದರು. ಈಗ ವಿಧಾನಸೌಧದಲ್ಲಿ ಸಚಿವರೇ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವ ಜಯತೇ ಎಂದರೆ ಇದೇನಾ? ಇವರ ಸತ್ಯಮೇವ ಜಯತೆ ಬರೀ ಜಾಹೀರಾತಿಗೆ ಸೀಮಿತವಾಗಿದೆ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.
ಗಾಂಧೀಜಿ ಅವರ ಸತ್ಯಮೇವ ಜಯತೆ ಮಾತಿನಂತೆ ಸಿದ್ದರಾಮಯ್ಯ ಅವರು ನಡೆದುಕೊಳ್ಳುತ್ತಿದ್ದಾರಾ? ಅವರ ಆತ್ಮಕ್ಕೆ ಅವರೇ ಉತ್ತರ ಕೊಟ್ಟುಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೆ ಇತಿಮಿತಿ ಇಲ್ಲವಾ? ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ
ರಾಜ್ಯದ ಗುತ್ತಿಗೆದಾರ ಪರಿಸ್ಥಿತಿ ಶೋಚನೀಯವಾಗಿದೆ. ಇವತ್ತಿನ ಪರಿಸ್ಥಿತಿ ನೋಡಿದರೆ ಹಿಂದಿನ ಬಿಜೆಪಿ ಸರಕಾರವೇ ಚೆನ್ನಾಗಿತ್ತು ಎನ್ನುತ್ತಿದ್ದಾರೆ ಕಾಂಗ್ರೆಸ್ ಪರವಾಗಿರುವ ಗುತ್ತಿಗೆದಾರರು. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಬೆಲೆ ತರಬೇಕಾಗುತ್ತದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.
ಗ್ಯಾರಂಟಿಗಳನ್ನು ನಿಲ್ಲಿಸಲು ಸರಕಾರ ನೆಪ ಹುಡುಕುತ್ತಿದೆ!
ಸರಕಾರಿ ಬಸ್ ಪ್ರಯಾಣ ದರವನ್ನು ಒಮ್ಮೆಲೇ ಶೇ.15ರಷ್ಟು ಏರಿಕೆ ಮಾಡಿರುವ ಬಗ್ಗೆಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ನಿಲ್ಲಿಸಲು ಕಾರಣವನ್ನು ಹುಡುಕುತ್ತಿದೆ. ಹೇಗಾದರೂ ಮಾಡಿ ಗ್ಯಾರಂಟಿ ನಿಲ್ಲಿಸಲು ನೆಪ ಹುಡುಕುತ್ತಿದೆ ಎಂದು ದೂರಿದರು.
ಯಾವುದೇ ಕಾರಣಕ್ಕೂ 5 ಗ್ಯಾರಂಟಿಗಳನ್ನು ನಿಲ್ಲಿಸಬೇಡಿ. ಸಾಕಷ್ಟು ಜನರಿಗೆ ಇದರಿಂದ ಅನುಕೂಲ ಆಗಿದೆ ಎಂದು ನೀವೇ ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಮತ ಕೊಟ್ಟು ಅಧಿಕಾರ ನೀಡಿದ ಜನರಿಂದ ಅವುಗಳನ್ನು ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಮಾಡಬಾರದು. ಮಧ್ಯಮ ವರ್ಗದ ಜನರ ಬದುಕಿನ ಜತೆ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಅತ್ತೆಯದನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಅವರಿಂದ ಕಿತ್ತು ಅವರಿಗೆ ಕೊಡುವುದಕ್ಕೆ ಇವರೇ ಆಗಬೇಕಾ? ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮನ್ಯರಿಗೆ ಹೊರೆಯಾಗಲಿದೆ. ಯಾವುದೇ ಮಂತ್ರಿಯ ಮಕ್ಕಳು, ಶಾಸಕರ ಮಕ್ಕಳು ಸರಕಾರಿ ಬಸ್ ನಲ್ಲಿ ಓಡಾಡುವುದಿಲ್ಲ. ಓಡಾಡುವವರೆಲ್ಲಾ ಜನ ಸಾಮಾನ್ಯರು. ದಿನಕ್ಕೆ 10 ರೂಪಾಯಿ ಹೆಚ್ಚಿಗೆಯಾದರೂ ಅದು ಅವರಿಗೆ ಹೊರೆಯಾಗಲಿದೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಬಸ್ ದರ ಪ್ರಶ್ನಿಸಿದರೆ ಮಾಂಸ ತಿನ್ನುವುದಿಲ್ಲವಾ ಎಂದು ಹಾರಿಕೆಯ ಮಾತನಾಡುತ್ತಾರೆ ಸಚಿವರು. ಬಡವರು ಮಾಂಸ ತಿನ್ನುವುದರ ಮೇಲೆ ಏಕೆ ಇವರಿಗೇಕೆ ಕಣ್ಣು? ಬಡ ಮಧ್ಯಮ ವರ್ಗದವರು ವಾರಕ್ಕೆ ಒಮ್ಮೆ ಮಾಂಸ ಖರೀದಿ ಮಾಡಲು ಎಷ್ಟು ಕಷ್ಟಪಡುತ್ತಾರೆ ಗೊತ್ತಾ ಇವರಿಗೆ? ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಜವರ ಕಾರ್ಯಕ್ರಮ ಏನು? ಅಷ್ಟು ಪರಿಜ್ಞಾನ ಬೇಡವೇ ಇವರಿಗೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
BREAKING : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ `ಯುವನಿಧಿ’ ವಿಶೇಷ ನೋಂದಣಿ ಅಭಿಯಾನ : ಸರ್ಕಾರ ಮಹತ್ವದ ಆದೇಶ.!
ರಾಜ್ಯದ `ಕಾರ್ಮಿಕರಿಗೆ’ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು.!