ಬೆಂಗಳೂರು : ವಿಶ್ವವಿಖ್ಯಾತ ಬೆಂಗಳೂರಿನ ಪ್ರಸಿದ್ಧ ದ್ರೌಪದಿ ದೇವಿ ಕರಗ ಶಕ್ತ್ಯೋತ್ಸವವು ಶನಿವಾರ ಮಧ್ಯರಾತ್ರಿ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ನಡೆಯಿತು. ಲಕ್ಷಾಂತರ ಭಕ್ತರು ದರ್ಶನ ಪಡೆದಿದ್ದಾರೆ.
ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಹೊರಟ ಕರಗ ಮೆರವಣಿಗೆಯ ದರ್ಶನ ಪಡೆದು ಲಕ್ಷಾಂತರ ಭಕ್ತರು ಪುನೀತರಾದರು. ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಅರ್ಚಕ ಜ್ಞಾನೇಂದ್ರ ಅವರು ಅರಿಶಿನ ಬಣ್ಣದ ಸೀರೆ, ಬಳೆ ತೊಟ್ಟು ಕಬ್ಬನ್‌ಪಾರ್ಕ್ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಬಂದ ಕರಗ, ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡ ಪೇಟೆಯಿಂದ ಕೆ.ಆರ್.ಮಾರುಕಟ್ಟೆ ತಲುಪಿತು. ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಬಳೇಪೇಟೆ, ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆ, ಅವೆನ್ಯೂ ರಸ್ತೆ, ಕುಂಬಾರಪೇಟೆ, ತಿಗಳರ ಪೇಟೆಯಲ್ಲಿ ಸಾಗಿತು.