ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಮೂವರು ಕಾರ್ಮಿಕರ ಶವಗಳನ್ನು ಹೊರತೆಗೆದಿದ್ದಾರೆ.
ಘಟನೆ ಹಿನ್ನೆಲೆ
ಹುಲಿಕಲ್ ಘಾಟಿಯ ಚಂಡಿಕಾಂಬಾ ದೇವಾಲಯದ ಸಮೀಪವಿರುವ ಹೇರ್ ಪಿನ್ ತಿರುವಿನಲ್ಲಿ ರಸ್ತೆ ಅಗಲೀಕರಣ ಹಾಗೂ ತಡೆಗೋಡೆ (Revetment Wall) ನಿರ್ಮಾಣದ ಕೆಲಸ ನಡೆಯುತ್ತಿತ್ತು. ಗುರುವಾರ ಸಂಜೆ ಸುಮಾರು 6:30ರ ವೇಳೆಗೆ ಏಳು ಮಂದಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ, ಮೇಲ್ಭಾಗದಿಂದ ಏಕಾಏಕಿ ಮಣ್ಣು ಕುಸಿದು ಬಿದ್ದಿದೆ. ಪರಿಣಾಮವಾಗಿ ಎಲ್ಲ ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದರು.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ರಾಘವೇಂದ್ರ (ರಾಘು) (37), ನಗರ ನಿವಾಸಿ ಹಾಗೂ ಕಾಮಗಾರಿ ಮೇಲ್ವಿಚಾರಕ. ರಾಜು (30) ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನೆಲಗಲ್ಲು ಗ್ರಾಮದ ಕಾರ್ಮಿಕ. ಶಬ್ಬೀರ್ (40) ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಕಾರ್ಮಿಕ ಎಂದು ಗುರುತಿಸಲಾಗಿದೆ.








