ಬೆಂಗಳೂರು : ‘ರಾಜ್ಯ ಸರ್ಕಾರವು ವಕ್ಫ್ ಮಂಡಳಿ ಜತೆ ಸೇರಿ ವಿಜಯಪುರ ಜಿಲ್ಲೆಯಲ್ಲಿ ರೈತರಿಂದ 15 ಸಾವಿರ ಎಕರೆ ಕೃಷಿ ಭೂಮಿ ಕಬಳಿಸಲು ಮುಂದಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟನೆ ನೀಡಿದ್ದು, ವಿಜಯಪುರದ ರೈತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್‌ನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅನಾವಶ್ಯಕವಾಗಿ ರಾಜಕೀಯ ಮಾಡ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸೂಕ್ತ ಅಲ್ಲ. ರೈತರಿಗೆ ನೋಟಿಸ್ ಹೋಗಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಅಲ್ಲಿನ ತಹಶಿಲ್ದಾರ್ ತಪ್ಪು ಮಾಡಿದ್ದಾರೆ. ಹೀಗಾಗಿ ನೋಟಿಸ್ ವಾಪಸ್ ಪಡೆಯೋ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿದೆ. ವಕ್ಫ್ ಹೆಸರಿನಲ್ಲಿ ರೈತರಿಂದ ಭೂಮಿ ಕಿತ್ತುಕೊಳ್ಳಲು ಹೊರಟಿದೆ. ಇವರಲ್ಲಿ ಬಹುತೇಕರು ಪರಿಶಿಷ್ಟ ಸಮುದಾಯದವರು. ಅವರಿಗೆ ನೋಟಿಸ್ ಕೊಟ್ಟು ಭೂಮಿ ಕಿತ್ತುಕೊಳ್ಳುವ ಮೂಲಕ ತುಘಲಕ್ ಆಡಳಿತ ಹೇರಲು ಪ್ರಯತ್ನಿಸಿದೆ ಎಂದು ಬಿಜೆಪಿ ಆರೋಪಿಸಿದೆ.