ನವದೆಹಲಿ: ಕ್ಯಾಲಿಫೋರ್ನಿಯಾದಲ್ಲಿ ಕಾರು ಡಿಕ್ಕಿ ಆಗಿ ಕೋಮಾ ಸ್ಥಿತಿಗೆ ತಳ್ಳಲ್ಪಟ್ಟ ಮಹಾರಾಷ್ಟ್ರದ ಮಹಿಳೆ ನೀಲಂ ಶಿಂಧೆ ಅವರ ಕುಟುಂಬಕ್ಕೆ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿ ತುರ್ತು ವೀಸಾ ನೀಡಿದೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ.
ಮಹಾರಾಷ್ಟ್ರದ ಸತಾರಾ ಮೂಲದ ಶಿಂಧೆ ಅವರು 10 ದಿನಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಕಾರು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು ಮತ್ತು ಅಂದಿನಿಂದ ಕೋಮಾದಲ್ಲಿದ್ದರು. ಯುಎಸ್ಗೆ ವೀಸಾ ಪಡೆಯಲು ಅವರ ಕುಟುಂಬವು ಕೇಂದ್ರದ ಸಹಾಯವನ್ನು ಕೋರಿತ್ತು.
ನೀಲಂ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದು, ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದಳು ಎಂದು ನೀಲಂ ಅವರ ತಂದೆ ತಾನಾಜಿ ಶಿಂಧೆ ಹೇಳಿದ್ದಾರೆ.
ಫೆಬ್ರವರಿ 14 ರಂದು ನೀಲಂ ಅವರು ಸಂಜೆ ವಾಕಿಂಗ್ ಮಾಡುತ್ತಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು ಎಂದು ಶಿಂಧೆ ಕುಟುಂಬವನ್ನು ಉಲ್ಲೇಖಿಸಿ ವರದಿ ತಿಳಿಸಿದೆ.
ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಇದು ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ಆಕೆಯ ಎರಡೂ ತೋಳುಗಳು, ಕಾಲುಗಳು, ತಲೆ ಮತ್ತು ಎದೆಗೆ ಗಂಭೀರ ಗಾಯಗಳಾಗಿವೆ ಎಂದು ಕುಟುಂಬ ಆರೋಪಿಸಿದೆ.