ಬಾಗ್ದಾದ್: ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ, ಅಮೆರಿಕದ ವಾಯುಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಇರಾಕ್‌ನಲ್ಲಿ ಅಮೆರಿಕದ ಸೇನೆಗೆ ಸೇರಿದ KC-135 ಇಂಧನ ಮರುಪೂರಣ (Refueling) ವಿಮಾನ ಪತನಗೊಂಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತವಾಗಿ ಪ್ರಕಟಿಸಿದೆ.
ಗುರುವಾರ (ಮಾರ್ಚ್ 12) ಈ ಅಪಘಾತ ಸಂಭವಿಸಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ ಅಡಿಯಲ್ಲಿ ಸೇನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎರಡು KC-135 ವಿಮಾನಗಳ ಪೈಕಿ ಒಂದು ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದೆ. ಅದೃಷ್ಟವಶಾತ್, ಎರಡನೇ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.
ವಿಮಾನವು ಶತ್ರುಗಳ ದಾಳಿಯಿಂದ ಪತನಗೊಂಡಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ತಾಂತ್ರಿಕ ದೋಷ ಅಥವಾ ಇತರ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ವಿಮಾನದಲ್ಲಿದ್ದ ಸಿಬ್ಬಂದಿಯನ್ನು ಪತ್ತೆಹಚ್ಚಲು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಇರಾನ್ ಜೊತೆಗಿನ ಈ ಸಂಘರ್ಷದ ಅವಧಿಯಲ್ಲಿ ಅಮೆರಿಕ ಕಳೆದುಕೊಂಡ ನಾಲ್ಕನೇ ವಿಮಾನ ಇದಾಗಿದೆ.
ಏನಿದು KC-135 ವಿಮಾನ?
ಅಮೆರಿಕ ವಾಯುಪಡೆಯಲ್ಲಿ ಕಳೆದ 60 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ವಿಮಾನವು ಅತ್ಯಂತ ನಿರ್ಣಾಯಕವಾದದ್ದು.
ಇದು ಹಾರಾಟದ ಸಮಯದಲ್ಲಿ ಇತರ ಯುದ್ಧ ವಿಮಾನಗಳಿಗೆ ಇಂಧನ ತುಂಬಿಸುವ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಇದರಲ್ಲಿ ಪೈಲಟ್, ಸಹ-ಪೈಲಟ್ ಮತ್ತು ಇಂಧನ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವ ‘ಬೂಮ್ ಆಪರೇಟರ್’ ಸೇರಿ ಮೂವರು ಇರುತ್ತಾರೆ. ಈ ವಿಮಾನವು ಸುಮಾರು 37 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಕುಕೃತ್ಯವಲ್ಲ, ‘ಫ್ರೆಂಡ್ಲಿ ಫೈರ್’ ದುರಂತ!
ಇದೇ ವೇಳೆ ಮತ್ತೊಂದು ಆಘಾತಕಾರಿ ವಿಷಯ ಹೊರಬಿದ್ದಿದೆ. ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಎದುರಿಸುವ ಸಂದರ್ಭದಲ್ಲಿ, ಕುವೈತ್‌ನಲ್ಲಿ ಅಮೆರಿಕದ ಮೂರು F-15E ಫೈಟರ್ ಜೆಟ್‌ಗಳು ನಾಶವಾಗಿವೆ. ಆದರೆ ಇವುಗಳನ್ನು ಹೊಡೆದುರುಳಿಸಿದ್ದು ಶತ್ರುಗಳಲ್ಲ, ಬದಲಿಗೆ ಮಿತ್ರರಾಷ್ಟ್ರವಾದ ಕುವೈತ್‌ನ ವಾಯು ರಕ್ಷಣಾ ಪಡೆಗಳು!
ತಪ್ಪಾದ ಗುರುತಿಸುವಿಕೆಯಿಂದಾಗಿ (Friendly Fire) ಈ ಘಟನೆ ನಡೆದಿದ್ದು, ಆರು ಮಂದಿ ಸಿಬ್ಬಂದಿ ಪ್ಯಾರಾಚೂಟ್ ಮೂಲಕ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ತಪ್ಪನ್ನು ಕುವೈತ್ ಒಪ್ಪಿಕೊಂಡಿದ್ದು, ಅಮೆರಿಕ ಸೇನೆಯು ಅವರ ರಕ್ಷಣಾ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದೆ.
https://youtu.be/jvpaP5ZHRtk?si=ad2GzO5O8cbIgNJB







