ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಹೆಡ್ ಕಾನ್ಸ್ ಟೇಬಲ್ , ಶಿಕ್ಷಕಿ ಸೇರಿ ಮೂವರು ಬಲಿಯಾಗಿದ್ದಾರೆ.
ಬೇಗೂರು ಠಾಣೆಯ ಹೆಡ್ ಕಾನ್ಸ್ ಟೇಬಲ್ ನಿಜಾಮುದ್ದೀನ್ (44) ಹೃದಯಾಘಾತದಿಂದ ಮೃತಪಟ್ಟ ಕಾನ್ಸ್ ಟೇಬಲ್ ಆಗಿದ್ದಾರೆ. ಆಡುಗೋಡಿ ಪೊಲೀಸ್ ಕ್ವಾಟರ್ಸ್ ನಲ್ಲಿ ವಾಸವಿದ್ದ ನಿಜಾಮುದ್ದೀನ್ ಬೆಳಗ್ಗೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನೆಲಮಂಗಲದಲ್ಲಿ ಹೃದಯಾಘಾತದಿಂದ ಖಾಸಗಿ ಶಾಲೆ ಶಿಕ್ಷಕಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಭಕ್ತನಪಾಳ್ಯದ ಮನೆಯಲ್ಲಿ ಕುಸಿದು ಬಿದ್ದು ಭಕ್ತನಪಾಳ್ಯದ ಸುಲೋಚನಾ (49) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ. ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸಂತಾಪಗಳು ವ್ಯಕ್ತವಾಗುತ್ತಿವೆ. ರಂಗಭೂಮಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಲಾಸೇವೆಯನ್ನು ಸಲ್ಲಿಸಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು.