ಹೈದರಾಬಾದ್ : ತ್ರಿನಯನಿ ನಟಿ ಪವಿತ್ರಾ ಜಯರಾಮ್ ಸಾವಿನಿಂದ ಮನನೊಂದು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಕಾರ್ತಿಕ ದೀಪಂ’, ‘ರಾಧಮ್ಮ ಪೆಲ್ಲಿ’, ‘ತ್ರಿನಯನಿ’ ಮತ್ತು ಇತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಚಂದು ಅವರು ಮೇ 12 ರಂದು ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಿವಿ ನಟಿ ಪವಿತ್ರಾ ಜಯರಾಮ್ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತ್ರಿನಯನಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಚಂದು ಹೆಸರುವಾಸಿಯಾಗಿದ್ದಾರೆ. 2015 ರಲ್ಲಿ ಶಿಲ್ಪಾ ಅವರನ್ನು ವಿವಾಹವಾದ ಚಂದು ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಚಂದು ಕಳೆದ ಆರು ವರ್ಷಗಳಿಂದ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲು ಬಯಸಿದ್ದರು. ಆದರೆ, ಈ ಮಧ್ಯೆ ಪವಿತ್ರಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆಕೆ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದೇ ಅಪಘಾತದಲ್ಲಿ ಚಂದು ಕೂಡ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಮಧ್ಯೆ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.