ಸಾಗರ : ಭಾನುವಾರ ನಿಧನರಾದ ಹಿರಿಯ ಸಾಹಿತಿ ಡಾ.ನಾ. ಡಿಸೋಜ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾಗರ ನಗರದಲ್ಲಿರುವ ಸ್ವಗ್ರಹಕ್ಕೆ ತರಲಾಗಿದ್ದು, ಇಂದು ಬೆಳಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಇಂದು ಬೆಳಗ್ಗೆ 10 ಗಂಟೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4 ಗಂಟೆ ಸುಮಾರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ರಾಜ್ಯ ಶಿಷ್ಠಾಚಾರದ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ನಾರ್ಬಟ್ ಡಿಸೋಜ ಹೆಸರಾಂತ ಸಾಹಿತಿಗಳು ಹಾಗೂ ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು. ಶಿವಮೊಗ್ಗ ಜಿಲ್ಲೆಯ ಇವರು ದಿನಾಂಕ 05-01-2025ರಂದು ನಿಧನರಾಗಿರುತ್ತಾರೆ. ಸದರಿಯವರ ನಿಧನಕ್ಕೆ ಸರ್ಕಾರವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಇನ್ನೂ ಮೃತರ ಗೌರವಾರ್ಥ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.