ಬೆಳಗಾವಿ: ಬೆಳಗಾವಿಯಲ್ಲಿ ಟಿಕೆಟ್ ಕೊಡುವಂತೆ ಮರಾಠಿಯಲ್ಲಿ ಕೇಳಿದಕ್ಕೆ ಕನ್ನಡ ಮಾತನಾಡು ಅಂತ ತಿಳಿಸಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮರಾಠಿ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಸುಳೇಬಾವಿ ಬಾಳೆಕುಂದ್ರಿ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ಸಂಚರಿಸುತ್ತಿದ್ದಾಗ ಯುವತಿಯೊಬ್ಬಳು ಟಿಕೆಟ್ ನೀಡುವಂತೆ ಮರಾಠಿಯಲ್ಲಿ ಕೇಳಿದ್ದಾಳೆ. ಕನ್ನಡ ಬರೋದಿಲ್ವ. ಕನ್ನಡದಲ್ಲೇ ಮಾತನಾಡಿ ಅಂತ ಕಂಡಕ್ಟರ್ ಮಹದೇವ್ ಹುಕ್ಕೇರಿ ಹೇಳಿದ್ದಾರೆ. ಕಂಡಕ್ಟರ್ ಈ ಮಾತಿನಿಂದ ಸಿಟ್ಟಾದಂತ ಅಲ್ಲೇ ಇದ್ದಂತ ಮರಾಠಿ ಯುವಕರು ಬಸ್ ನಿಲ್ಲಿಸಿ ಮಹದೇವ್ ಮೇಲೆ ಹಲ್ಲೆ ಮಾಡಿ ಥಳಿಸಿದ್ದರು.
ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರುತಿ ಅಲಿಯಾಸ್ ತುಮರಿ ದತ್ತು ಚಂದಗಡಕರ, ರಾಹುಲ್ ರಾಜು ನಾಯ್ಡು, ಬಾಳು ಸುರೇಶ ಗೊಂಜೇಕರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕ ಮಹದೇವ ಹುಕ್ಕೇರಿ ಅವರ ಮೇಲೆ ಸುಳೇಬಾವಿ -ಬಾಳೇಕುಂದ್ರಿ ನಡುವೆ ಬಸ್ ನಿಲ್ಲಿಸಿ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಗೆ ಕಂಡಕ್ಟರ್ ದೂರು ನೀಡಿದ್ದರು.