ಬೆಂಗಳೂರು: ಬೆಂಗಳೂರಿನಲ್ಲಿ ಬೆತ್ತಲಾಗಿ ಬಂದು ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆ ಕರೆ ಕೊರೆದು 85 ಮೊಬೈಲ್ ದೋಚಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೇ 9ರ ತಡರಾತ್ರಿ ಹೊಂಗಸಂದ್ರ ಬಳಿಯ ದಿನೇಶ್ ಎಂಬಾತನಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್‌ನಲ್ಲಿ ಕಳ್ಳತನ ಮಾಡಿದ್ದ ಅರಕೆರೆಯಲ್ಲಿ ವಾಸವಾಗಿರುವ ಅಸ್ಸಾಂ ಮೂಲದ ಇಕ್ರಂ ಉಲ್ ಹಸನ್ ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ಹಸನ್ ಮೂರು ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಬಂದು ಅರಕೆರೆಯಲ್ಲಿ ನೆಲೆಸಿದ್ದ. ಮೊದಲು ಸೆಂಟ್ರಲ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಂತರ ಮತ್ತೊಂದು ಮಳಿಗೆಯಲ್ಲಿ ಸ್ವಚ್ಛತಾ ಕೆಲಸಗಾರನಾಗಿ ದುಡಿಯುತ್ತಿದ್ದ. ಸುಲಭವಾಗಿ ಹಣ ಸಂಪಾದಿಸಲು ಕಳ್ಳತನಕ್ಕೆ ಇಳಿದಿದ್ದ. ಮೊಬೈಲ್ ಅಂಗಡಿ ಮಾಲೀಕ ದಿನೇಶ್ ಎಂದಿನಂತೆ ಅಂಗಡಿ ವಹಿವಾಟು ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ್ದರು. ತಡರಾತ್ರಿ ಗೋಡೆ ಕೊರೆದು ಬೆತ್ತಲೆಯಾಗಿ ಒಳ ನುಗ್ಗಿದ ಹಸನ್ ಮುಖಚಹರೆ ಕಾಣಿಸಿದಂತೆ ಮಾಸ್ಕ್ ಹಾಕಿಕೊಂಡಿದ್ದ. ಲಕ್ಷಾಂತರ ರೂ. ಮೌಲ್ಯದ 85 ಮೊಬೈಲ್ ಗಳನ್ನು ಕಳವು ಮಾಡಿದ್ದ.