ಬೆಂಗಳೂರು : ಬೆಂಗಳೂರಿನಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಆರ್ ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 8 ವರ್ಷದ ಮಗು, 14 ವರ್ಷದ ಬಾಲಕಿಯೂ ಸೇರಿದ್ದಾರೆ.
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ 8 ವರ್ಷದ ಮಗು, 14 ವರ್ಷದ ಬಾಲಕಿ ದಿವ್ಯಾಂಶಿ ಮೃತಪಟ್ಟಿದ್ದಾರೆ. ಯಲಹಂಕ ಕಣ್ಣೂರಿನ ನಿವಾಸಿ ಶಿವಕುಮಾರ್, ಅಶ್ವಿನಿ ದಂಪತಿ ಮಗಳಾದ ದಿವ್ಯಾಂಶಿ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಳು.
ಆರ್ಸಿಬಿ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಈ ನಡುವೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ಗೇಟ್ ನಂ.12 ರಲ್ಲಿ ಕಾಲ್ತುಳಿತ ಉಂಟಾಗಿದ್ದು, ಈ ವೇಳೆ ಕೆಲ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಭಿಮಾನದ ಹೆಸರಲ್ಲಿ ಭಾರಿ ದುರಂತ ಸಂಭವಿಸಿದ್ದು, ಬೌರಿಂಗ್ ಆಸ್ಪತ್ರೆ ಮಾತ್ರವಲ್ಲ ಮಲ್ಯ ರಸ್ತೆಯ ವೈದೇಹಿ ಆಸ್ಪತ್ರೆಗೂ ಗಾಯಾಳುಗಳನ್ನು ದಾಖಲಿಸಲಾಗಿದೆ. ಸದ್ಯ 7 ಮಂದಿಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಟ್ಟು ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.