ನವದೆಹಲಿ: ಭಾರತೀಯ ವಾಯುಪಡೆಗೆ (IAF) ಸೇರಿದ ಸುಖೋಯ್-30 ಎಂಕೆಐ (Su-30 MKI) ಯುದ್ಧವಿಮಾನವೊಂದು ಗುರುವಾರ ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡಿದೆ. ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ವಾಯುಪಡೆ ತಿಳಿಸಿದೆ.
ವಿಮಾನದಲ್ಲಿದ್ದ ಪೈಲಟ್‌ಗಳ ಸ್ಥಿತಿಗತಿಯ ಬಗ್ಗೆ ಸದ್ಯಕ್ಕೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ತರಬೇತಿ ಕಾರ್ಯಾಚರಣೆಯಲ್ಲಿದ್ದ ಈ ವಿಮಾನವು ಜೋರ್ಹತ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕಾರ್ಬಿ ಆಂಗ್ಲಾಂಗ್ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಐಎಎಫ್ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾ ಮೂಲದ ಈ ಯುದ್ಧವಿಮಾನದೊಂದಿಗಿನ ಸಂಪರ್ಕವು ಗುರುವಾರ ರಾತ್ರಿ 7:42ರ ಸುಮಾರಿಗೆ ಕಡಿತಗೊಂಡಿತ್ತು. ವಿಮಾನದ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಖೋಯ್-30 ಎಂಕೆಐ ಹಿನ್ನೆಲೆ:
Su-30MKI ರಷ್ಯಾದ ವಿಮಾನ ತಯಾರಕ ಸಂಸ್ಥೆಯಾದ ‘ಸುಖೋಯ್’ ಅಭಿವೃದ್ಧಿಪಡಿಸಿದ ಎರಡು-ಆಸನಗಳ, ಬಹು-ಕಾರ್ಯಕ್ಷಮತೆಯ (multirole) ದೀರ್ಘ-ಶ್ರೇಣಿಯ ಯುದ್ಧವಿಮಾನವಾಗಿದೆ. ಪ್ರಸ್ತುತ ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿಯಡಿ ಭಾರತೀಯ ವಾಯುಪಡೆಗಾಗಿ ದೇಶಿಯವಾಗಿ ನಿರ್ಮಿಸುತ್ತಿದೆ








