ನವದೆಹಲಿ: ಇಂದು ನಡೆಯಲಿರುವ ನೀಟ್ ಪರೀಕ್ಷೆಗೂ ಮುನ್ನವೇ ನೀಟ್ ಆಕಾಂಕ್ಷಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕುನ್ಹಾಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅರವಿಂದ್ ಭಾರದ್ವಾಜ್ ಮಾತನಾಡಿ, ಪಾರ್ಶ್ವನಾಥ್ ಪ್ರದೇಶದ ತನ್ನ ಕೋಣೆಯಲ್ಲಿ ಕಬ್ಬಿಣದ ಗ್ರಿಲ್ಗೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿ ಮಧ್ಯಪ್ರದೇಶದ ಶಿಯೋಪುರ್ ಮೂಲದವಳಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದಾಳೆ. ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ನೀಟ್-ಯುಜಿಗೆ ತಯಾರಿ ನಡೆಸಲು ವಿದ್ಯಾರ್ಥಿನಿ ಹಲವಾರು ವರ್ಷಗಳಿಂದ ಕೋಟಾದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.
ಶನಿವಾರ ಸಂಜೆ ಬಾಲಕಿ ತನ್ನ ಸ್ಕಾರ್ಫ್ ಬಳಸಿ ತನ್ನ ಕೋಣೆಯ ಕಬ್ಬಿಣದ ಗ್ರಿಲ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಸಮಯದಲ್ಲಿ ಆಕೆಯ ಕುಟುಂಬ ಸದಸ್ಯರು ಮನೆಯಲ್ಲಿದ್ದರು ಮತ್ತು ರಾತ್ರಿ 9 ಗಂಟೆ ಸುಮಾರಿಗೆ ಅವಳು ಮೃತಪಟ್ಟಿರುವುದನ್ನು ಕಂಡುಕೊಂಡರು ಎಂದು ವರದಿಯಾಗಿದೆ. ಆಕೆಯ ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡುಬಂದಿಲ್ಲ ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.