ಗೋರಖ್ ಪುರ : ಉತ್ತರ ಪ್ರದೇಶದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ.
ಗೋರಖ್ಪುರದಲ್ಲಿ ನಡೆದ ‘ಏಕತಾ ಯಾತ್ರೆ’ ಮತ್ತು ವಂದೇ ಮಾತರಂ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ರಾಷ್ಟ್ರದ ಬಗ್ಗೆ ಗೌರವ ಮತ್ತು ಹೆಮ್ಮೆಯನ್ನು ಮೂಡಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಹೇಳಿದರು.
“ರಾಷ್ಟ್ರೀಯ ಗೀತೆ ವಂದೇ ಮಾತರಂ ಬಗ್ಗೆ ಗೌರವ ಭಾವನೆ ಇರಬೇಕು. ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ನಾವು ಅದನ್ನು ಹಾಡುವುದನ್ನು ಕಡ್ಡಾಯಗೊಳಿಸುತ್ತೇವೆ” ಎಂದು ಆದಿತ್ಯನಾಥ್ ಸಭೆಯನ್ನುದ್ದೇಶಿಸಿ ಹೇಳಿದರು.








