ಟರ್ಕಿ : ಟರ್ಕಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಲಿಬಿಯಾದ ಸೇನಾ ಮುಖ್ಯಸ್ಥ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಜನರಲ್ ಮುಹಮ್ಮದ್ ಅಲಿ ಅಹ್ಮದ್ ಅಲ್ ಹದ್ದಾದ್ ಅವರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ಖಾಸಗಿ ಜೆಟ್ ಅಂಕಾರಾ ಬಳಿ ಪತನಗೊಂಡ ನಂತರ ಅದರ ಅವಶೇಷಗಳು ಪತ್ತೆಯಾಗಿವೆ ಎಂದು ಟರ್ಕಿಶ್ ಸರ್ಕಾರ ತಿಳಿಸಿದೆ.
ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬೆಹ್ ಹೇಳಿಕೆಯೊಂದರಲ್ಲಿ, ಲಿಬಿಯಾ ಸೇನಾ ಮುಖ್ಯಸ್ಥ ಹದ್ದಾದ್ ಅವರ ನಷ್ಟವು “ತಾಯ್ನಾಡಿಗೆ ದೊಡ್ಡ ನಷ್ಟ” ಎಂದು ಹೇಳಿದ್ದಾರೆ.
ಲಿಬಿಯಾದ ಮಿಲಿಟರಿ ಮುಖ್ಯಸ್ಥ, ಇತರ ನಾಲ್ವರು ಅಧಿಕಾರಿಗಳು ಮತ್ತು ಮೂವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಜೆಟ್ ಮಂಗಳವಾರ ಟರ್ಕಿಯ ರಾಜಧಾನಿ ಅಂಕಾರಾದಿಂದ ಹೊರಟ ಸ್ವಲ್ಪ ಸಮಯದ ನಂತರ ಪತನಗೊಂಡು, ವಿಮಾನದಲ್ಲಿದ್ದ ಏಳು ಜನರು ಸಾವನ್ನಪ್ಪಿದರು. ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಲಿಬಿಯಾ ಮತ್ತು ಟರ್ಕಿ ನಡುವಿನ ಮಿಲಿಟರಿ ಸಹಕಾರವನ್ನು ಬಲಪಡಿಸುವತ್ತ ಗಮನಹರಿಸಿದ ಉನ್ನತ ಮಟ್ಟದ ರಕ್ಷಣಾ ಮಾತುಕತೆಗಾಗಿ ಲಿಬಿಯಾದ ನಿಯೋಗ ಅಂಕಾರಾದಲ್ಲಿತ್ತು ಎಂದು ಟರ್ಕಿಶ್ ಅಧಿಕಾರಿಗಳು ತಿಳಿಸಿದ್ದಾರೆ.
ಲಿಬಿಯಾದ ಪ್ರಧಾನಿ ಅಬ್ದುಲ್-ಹಮೀದ್ ದ್ಬೈಬಾ ಫೇಸ್‌ಬುಕ್ ಹೇಳಿಕೆಯಲ್ಲಿ ಜನರಲ್ ಮುಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಅವರ ಸಾವನ್ನು ದೃಢಪಡಿಸಿದರು, ಅಪಘಾತವನ್ನು “ದುರಂತ ಅಪಘಾತ” ಮತ್ತು ದೇಶಕ್ಕೆ “ದೊಡ್ಡ ನಷ್ಟ” ಎಂದು ಕರೆದರು. ತಾಂತ್ರಿಕ ದೋಷದಿಂದಾಗಿ ವಿಮಾನ ಹಾರಾಟ ಆರಂಭಿಸಿದ ಅರ್ಧ ಗಂಟೆಯೊಳಗೆ ಸಂಪರ್ಕ ಕಡಿತಗೊಂಡಿತು ಎಂದು ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.








