ಬೆಂಗಳೂರು : Meesho ಕಂಪನಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗುಜರಾತ್ ಮೂಲದ ಮೂವರು ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ.
Meesho ಕಂಪನಿಯಲ್ಲಿ ಗುಜರಾತ್ ಮೂಲದ ಸರಬರಾಜುದಾರರು (Sellers) 3ನೇ ಪಾರ್ಟಿ ಏಜೆಂಟ್‌ಗಳ ಜೊತೆ ಕೈಜೋಡಿಸಿ, ಗ್ರಾಹಕರುಗಳನ್ನು (Buyers) ಸೃಷ್ಟಿಸಿ, ಜನವರಿ-2024 ರಿಂದ ಜುಲೈ-2024 ರವರೆಗೆ 7 ತಿಂಗಳ ಅವಧಿಯಲ್ಲಿ ಒಟ್ಟು 5 ಕೋಟಿ 50 ಲಕ್ಷ ನಷ್ಟವಾಗಿರುತ್ತದೆಂದು ದೂರಿನಲ್ಲಿ ಕಂಪನಿ ಅಧಿಕಾರಿ ತಿಳಿಸಿರುತ್ತಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣವು ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಸೈಬರ್ ಕ್ರೈಂ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, Meesho ಕಂಪನಿಯಿಂದ ಆನ್‌ಲೈನ್ ಮುಖಾಂತರ ಹಣವನ್ನು ವರ್ಗಾವಣೆ ಮಾಡಿಕೊಂಡ ಬ್ಯಾಂಕ್ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವಾರು ಮೊಬೈಲ್ ಪೋನ್ ನಂಬರ್‌ಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಈ ಪ್ರಕರಣದಲ್ಲಿ ವಂಚನೆ ಮಾಡಿದವರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ. ಈ ತಂಡವನ್ನು ಗುಜರಾತ್ ರಾಜ್ಯಕ್ಕೆ ಕಳುಹಿಸಲಾಗಿತ್ತು.
ದಿನಾಂಕ:21/11/2024 ರಂದು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ವ್ಯಕ್ತಿಗಳನ್ನು ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪತ್ತೆಮಾಡಿ, ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮೂವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತನ್ನೊಪ್ಪಿಕೊಂಡಿದ್ದು, ಅಲ್ಲದೆ ಇತರೆ ಮೂವರು ಸಹಚರರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಈ ಮೂವರು ಸಹಚರರು ತಲೆಮೆರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.