ಲಕ್ನೋ: ಉತ್ತರ ಪ್ರದೇಶದ ರಾಜಕೀಯದ ದಿಗ್ಗಜ, ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38) ಬುಧವಾರ ಮುಂಜಾನೆ ಲಕ್ನೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, ಪ್ರತೀಕ್ ಯಾದವ್ ಅವರನ್ನು ಇಂದು ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ಲಕ್ನೋದ ಸಿವಿಲ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಇವರ ಪತ್ನಿ ಅಪರ್ಣಾ ಯಾದವ್ ಪ್ರಸ್ತುತ ಬಿಜೆಪಿ ನಾಯಕಿಯಾಗಿದ್ದಾರೆ.ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿದ್ದರೂ ಪ್ರತೀಕ್ ರಾಜಕೀಯದಿಂದ ದೂರವಿದ್ದರು. ಬ್ರಿಟನ್ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಇವರು, ರಿಯಲ್ ಎಸ್ಟೇಟ್ ಮತ್ತು ಫಿಟ್ನೆಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಲಕ್ನೋದಲ್ಲಿ ‘ದಿ ಫಿಟ್ನೆಸ್ ಪ್ಲಾನೆಟ್’ ಎಂಬ ಜಿಮ್ ನಡೆಸುತ್ತಿದ್ದ ಅವರು, ‘ಜೀವ್ ಆಶ್ರಯ್’ ಎಂಬ ಸಂಸ್ಥೆಯ ಮೂಲಕ ಬೀದಿ ನಾಯಿಗಳ ಆರೈಕೆ ಮತ್ತು ರಕ್ಷಣೆಯಂತಹ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಅಕಾಲಿಕ ಮತ್ತು ನಿಗೂಢ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ಹಿಂದಿನ ಅಸಲಿ ಕಾರಣ ಏನೆಂಬುದು ಸ್ಪಷ್ಟವಾಗಲಿದೆ.
ಉತ್ತರ ಪ್ರದೇಶದ ಪ್ರಭಾವಿ ರಾಜಕೀಯ ಕುಟುಂಬದ ಸದಸ್ಯನ ಸಾವು ರಾಜ್ಯದ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಗಣ್ಯರು ಕಂಬನಿ ಮಿಡಿದಿದ್ದಾರೆ.








