ಮಾಸ್ಕೋ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರಿಳಿತ ಮತ್ತು ದೇಶೀಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ರಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 1, 2026 ರಿಂದ ಅನ್ವಯವಾಗುವಂತೆ ಗ್ಯಾಸೋಲಿನ್ (ಪೆಟ್ರೋಲ್) ರಫ್ತಿನ ಮೇಲೆ ರಷ್ಯಾ ಸಂಪೂರ್ಣ ನಿಷೇಧ ಹೇರಿದೆ.
ರಷ್ಯಾದ ಒಳನಾಡಿನಲ್ಲಿ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೆಲೆ ಏರಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಷೇಧವು ಜುಲೈ 31ರವರೆಗೆ ಜಾರಿಯಲ್ಲಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಗಗನಕ್ಕೇರುತ್ತಿರುವುದರಿಂದ, ರಷ್ಯಾದೊಳಗೆ ಪೆಟ್ರೋಲ್ ಬೆಲೆ ಜನಸಾಮಾನ್ಯರ ಕೈತಪ್ಪದಂತೆ ನೋಡಿಕೊಳ್ಳುವುದು ಪುಟಿನ್ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಪಶ್ಚಿಮ ಏಷ್ಯಾದಲ್ಲಿ (ಇರಾನ್-ಇಸ್ರೇಲ್) ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ದೇಶದ ಇಂಧನ ಭದ್ರತೆಗೆ ರಷ್ಯಾ ಮೊದಲ ಆದ್ಯತೆ ನೀಡುತ್ತಿದೆ.ರಫ್ತು ನಿಷೇಧವು ಬೆಲಾರಸ್, ಕಜಕಿಸ್ತಾನ್, ಅರ್ಮೇನಿಯಾ ಮತ್ತು ಕಿರ್ಗಿಸ್ತಾನ್ ಸೇರಿದಂತೆ ‘ಯುರೇಷಿಯನ್ ಎಕನಾಮಿಕ್ ಯೂನಿಯನ್’ ಸದಸ್ಯ ರಾಷ್ಟ್ರಗಳಿಗೆ ಅನ್ವಯಿಸುವುದಿಲ್ಲ ಎನ್ನಲಾಗಿದೆ.
ರಷ್ಯಾ ವಿಶ್ವದ ಪ್ರಮುಖ ತೈಲ ರಫ್ತುದಾರ ದೇಶಗಳಲ್ಲಿ ಒಂದಾಗಿರುವುದರಿಂದ, ಈ ರಫ್ತು ನಿಷೇಧದ ನಿರ್ಧಾರವು ಯುರೋಪ್ ಮತ್ತು ಏಷ್ಯಾದ ಹಲವು ದೇಶಗಳಲ್ಲಿ ಇಂಧನ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.








