ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂದ ತನಿಖೆ ನಡೆಸುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇದೀಗ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ದರ್ಶನ್ & ಗ್ಯಾಂಗ್ ಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ತಡರಾತ್ರಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈತ ಆರೋಪಿಗಳ ಮೊಬೈಲ್ ಡೇಟಾ ಡಿಲೀಟ್ ಮಾಡಲು ನೆರವಾಗುತ್ತಿದ್ದ ಎನ್ನಲಾಗಿದ್ದು, ಸದ್ಯ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ತಾಂತ್ರಿಕ ಸಾಕ್ಷ್ಯ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಾಂಧರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ತನಿಖೆಗೆ ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಇಟ್ಟುಕೊಂಡಿದ್ದಾರೆ. ಬಹುತೇಕ ಕೊಲೆ ಪ್ರಕರಣ ಅಂತಿಮ ಹಂತಕ್ಕೆ ಬಂದಿದೆ.
ಪೊಲೀಸರು ನಾಳೆ ಕೊಲೆ ಆರೋಪಿಗಳನ್ನು ಕೋರಮಂಗಲದ ಜಡ್ಜ್ ಮುಂದೆ ಹಾಜರಪಡಿಸಲು ಸಿದ್ದತೆ ನಡೆಸಲಾಗಿದ್ದು, ನಾಳೆ ಕೋರ್ಟ್ ಅನುಮತಿ ಪಡೆದು ದರ್ಶನ್ ಮತ್ತು ಸಹಚರರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಲಿದ್ದಾರೆ ಎನ್ನಲಾಗಿದೆ.