ಹಾಸನ : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಪ್ರಜ್ವಲ್ ರೇವಣ್ಣ ನವರದ್ದು ಎನ್ನಲಾಗಿರುವ ರಾಸಲೀಲೆ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳು ಹಾಸನದಲ್ಲಿ ಮತ್ತೆ ವಿಡಿಯೋಗಳು, ಫೋಟೋಗಳನ್ನು ಹರಿಬಿಡುತ್ತಿದ್ದಾರೆ.
ಹಾಸನದಲ್ಲಿ ಕಿಡಿಗೇಡಿಗಳು ದಿನಕೊಂದು ವಿಡಿಯೋಗಳನ್ನು ಹರಿಬಿಡುತ್ತಿದ್ದು, ವಿಡಿಯೋಗಳು, ಪೋಟೋಗಳನ್ನು ಕಿಡಿಗೇಡಿಗಳು ವಾಟ್ಸಪ್, ಇನ್ ಸ್ಟಾಗ್ರಾಂ ಹಾಗೂ ಟೆಲಿಗ್ರಾಂನಲ್ಲಿ ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ನೂರಾರು ಫೋಟೋಗಳು, ೨೦ ಕ್ಕೂ ಹೆಚ್ಚು ವಿಡಿಯೋಗಳನ್ನು ಮತ್ತೆ ಹರಿಬಿಡಲಾಗಿದೆ. ಹಾಸನ ಮಾತ್ರವಲ್ಲದೇ ರಾಜ್ಯಾದ್ಯಂತ ವಿಡಿಯೋಗಳು ವೈರಲ್ ಆಗಿವೆ.
ಈ ನಡುವೆ ಜರ್ಮನಿಗೆ ತೆರಳಿರುವ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದಾರೆ. ಮೇ.15 ರ ಮಧ್ಯಾಹ್ನ 1.30 ಕ್ಕೆ ಫ್ರಾಂಕ್ ಫರ್ಟ್ ನಿಂದ ವಿಮಾನವು ಹೊರಡಲಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.
ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್ ಐಟಿಗೆ ನೀಡುವ ಮುನ್ನವೇ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಹೋಗಿದ್ದು,ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿರುವ ಕಾರಣ ವಿಚಾರಣೆಗೆ ಒಂದು ವಾರಗಳ ಕಾಲ ಸಮಯ ಕೇಳಿದ್ದಾರೆ.