ಬೆಂಗಳೂರು : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಇಂದು ಮತ್ತೆ ಮೂರು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹಮಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲೂ ಎರಡು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇದ್ದು, ಕೆಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಇನ್ನು ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕೆಲ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬೆಳಗಾವಿಯ ಜಿಲ್ಲೆಯ ಐದು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ, ಖಾನಾಪುರ, ಬೈಲಹೊಂಗಲ, ಕಿತ್ತೂರು ಹಾಗೂ ಸವದತ್ತಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ.
ದಾವಣಗೆರೆ ನಗರ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ದಾವಣಗೆರೆ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಇಂದು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.