ಬೆಂಗಳೂರು : ಯಾದಗಿರಿ ಪಿಎಸ್ ಐ ಪರಶುರಾಮ್ ಪತ್ನಿ ಶ್ವೇತಾಗೆ ಸರ್ಕಾರಿ ಉದ್ಯೋಗ, ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಪರಶುರಾಮ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಹಾಗೂ ಶಾಸಕನ ಪುತ್ರನ ವಿರುದ್ಧ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಯಾದಗಿರಿ ಎಸ್ ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಪಿಎಸ್‌ಐ ಪರಶುರಾಮ್ ಸಾವಿಗೆ ಶಾಸಕರು ಹಾಗೂ ಅವರ ಪುತ್ರ ಕಾರಣ ಎನ್ನಲಾಗಿತ್ತು. ಈ ಸಂಬಂಧ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ನಿನ್ನೆ ಮೃತ ಪಿಎಸ್‌ಐ ಪರಶುರಾಮ್ ಅವರ ಪಾರ್ಥಿವ ಶರೀರವನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸೋಮನಾಳ ಗ್ರಾಮಕ್ಕೆ ಕೊಂಡಯ್ಯಲಾಗಿತ್ತು. ಪರಶುರಾಮ್ ಅವರ ಕುಟುಂಬಕ್ಕೆ ಸೇರಿದಂತ ಸ್ವಗ್ರಾಮ ಸೋಮನಾಳದಲ್ಲಿ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.