ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ 12 ರಲ್ಲಿ ನಿರ್ಮಾಣ ಹಂತದಲ್ಲಿದ್ದ ಆಸ್ಪತ್ರೆಯ ನೆಲಮಾಳಿಗೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಉತ್ತರ ದ್ವಾರಕಾ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್ಸ್ಟೇಬಲ್ಗಳು ಸಂಜೆ 6.30 ರ ಸುಮಾರಿಗೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ದ್ವಾರಕಾ ಸೆಕ್ಟರ್ 12 ರ ಪೆಟ್ರೋಲ್ ಪಂಪ್ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಜನರು ಜಮಾಯಿಸಿರುವುದನ್ನು ನೋಡಿದರು. ಕಟ್ಟಡದ ಈಶಾನ್ಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ನೆಲಮಾಳಿಗೆಯ ಗೋಡೆ ಕುಸಿದಿದೆ ಎಂದು ಕಾನ್ಸ್ಟೇಬಲ್ಗಳು ತಿಳಿದುಕೊಂಡರು.
ಗಾಯಗೊಂಡವರೆಲ್ಲರೂ ಗಾರೆ ಕೆಲಸಗಾರರು. ಮೃತರನ್ನು ಹೊರತುಪಡಿಸಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತರ ಕಚೇರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಝಾನ್ಸಿಯ ಕಾಕರ್ವಾಯಿ ಮೂಲದ ದೇವಿ (35) ಎಂದು ಗುರುತಿಸಲಾಗಿದೆ. ಮೃತರು ಪತಿ ಸಂತೋಷ್ ಪಾಲ್, ಮಕ್ಕಳಾದ ನೇಹಾ (24), ಸಂಗೀತಾ (18) ಮತ್ತು ಸೌರಭ್ (12) ಅವರನ್ನು ಅಗಲಿದ್ದಾರೆ.
ಗಾಯಾಳುಗಳಿಗೆ ಇಂದಿರಾ ಗಾಂಧಿ ಆಸ್ಪತ್ರೆ ಮತ್ತು ಆಕಾಶ್ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ