ನವದೆಹಲಿ : ಮಧ್ಯಪ್ರದೇಶ ಹಾಗು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಸರಣಿ ಸಾವು ಸಂಭವಿಸಿದ್ದು, ಇದುವರೆಗೂ ಕೆಮಿನ ಸಿರಪ್ ಸೇವಿಸಿ ಮೃತಪಟ್ಟ ಮಕ್ಕಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕೆಮ್ಮಿನ ಸಿರಪ್ ಬರೆದುಕೊಟ್ಟ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಛಿಂದ್ವಾರ ಜಿಲ್ಲೆಯ ಪರಾಸಿಯಾದಲ್ಲಿ ಕನಿಷ್ಠ 11 ಮಕ್ಕಳು ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶ ಪೊಲೀಸರು ಸರ್ಕಾರಿ ಮಕ್ಕಳ ವೈದ್ಯರು ಮತ್ತು ತಮಿಳುನಾಡು ಮೂಲದ ಔಷಧ ಕಂಪನಿಯ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
ಶನಿವಾರ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ದಲ್ಲಿ ನಿಯೋಜಿತರಾಗಿರುವ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಮತ್ತು ತಮಿಳುನಾಡಿನ ಕಾಂಚಿಪುರಂನ ಮೆಸರ್ಸ್ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ನಿರ್ದೇಶಕರ ವಿರುದ್ಧ ಹೆಸರಿಸಲಾಗಿದೆ. ಅವರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಮತ್ತು 276 (ಔಷಧಗಳ ಕಲಬೆರಕೆ), ಹಾಗೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940 ರ ಸೆಕ್ಷನ್ 27 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ಈ ಸಿರಪ್ ಗಳನ್ನು ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.