ನವದೆಹಲಿ : ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಅದ್ಭುತ ಜಯ ಸಾಧಿಸಿದ ಕೆಲವು ದಿನಗಳ ನಂತರ, ಜನತಾದಳ ಯುನೈಟೆಡ್ ಮುಖ್ಯಸ್ಥ ನಿತೀಶ್ ಕುಮಾರ್ ಸಧ್ಯ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನ ಸಲ್ಲಿಸಿದ್ದಾರೆ. ಇನ್ನು ನವೆಂಬರ್ 20ರ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ 10ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
“ಪ್ರಮಾಣವಚನ ಸಮಾರಂಭವನ್ನ ವಿಶಾಲವಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗುವುದು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಇತರ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಧರ್ಮೇಂದ್ರ ಪ್ರಧಾನ್, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಉನ್ನತ ಎನ್‌ಡಿಎ ನಾಯಕರು ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ” ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಎನ್‌ಡಿಎಯ ಎರಡು ಪ್ರಮುಖ ಘಟಕಗಳಾದ ಬಿಜೆಪಿ ಮತ್ತು ಜೆಡಿ (ಯು) ಬಿಹಾರದಲ್ಲಿ ಸ್ಪರ್ಧಿಸಿದ 101 ಸ್ಥಾನಗಳಲ್ಲಿ ಸುಮಾರು 85 ಪ್ರತಿಶತದಷ್ಟು ಸ್ಟ್ರೈಕ್ ರೇಟ್ ಅನ್ನು ದಾಖಲಿಸಿವೆ. 2020 ರಲ್ಲಿ ಬಿಜೆಪಿ ಗೆದ್ದಿದ್ದ 74 ಸ್ಥಾನಗಳಿಂದ 89 ಸ್ಥಾನಗಳನ್ನು ಗಳಿಸಿದರೆ, ನಿತೀಶ್ ಕುಮಾರ್ ಅವರ ಜೆಡಿ-ಯು 85 ಸ್ಥಾನಗಳನ್ನು ಗಳಿಸಿ, ಹಿಂದಿನ 43 ಸ್ಥಾನಗಳನ್ನು ದ್ವಿಗುಣಗೊಳಿಸಿದೆ. ಮಹಾಘಟಬಂಧನ್ ಕೇವಲ 34 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು, ಆರ್‌ಜೆಡಿ ಕೇವಲ 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಸ್ಪರ್ಧಿಸಿದ 61 ಸ್ಥಾನಗಳಲ್ಲಿ ಕೇವಲ ಆರು ಸ್ಥಾನಗಳನ್ನು ಗೆದ್ದಿತು.
ಗಾಂಧಿ ಮೈದಾನ ಕಾರ್ಯಕ್ರಮವನ್ನು ಪ್ರಮುಖ ಸಾರ್ವಜನಿಕ ಪ್ರದರ್ಶನವನ್ನಾಗಿ ಪರಿವರ್ತಿಸಲು ರಾಜ್ಯ ಆಡಳಿತ ಅಧಿಕಾರಿಗಳು ಭಾನುವಾರ ಪ್ರಮಾಣವಚನ ಸಮಾರಂಭದ ಸಿದ್ಧತೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರು.








