ನವದೆಹಲಿ : ಈ ವರ್ಷದ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲು ಬಹುಮಾನ ನೀಡುವುದಾಗಿ ಮತ್ತು “ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನ ಹರಡಿದರು” ಎಂಬ ಆರೋಪದ ಮೇಲೆ ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೊಸ ಪ್ರಕರಣ ದಾಖಲಿಸಿದೆ.
ದೂರಿನ ಪ್ರಕಾರ, ನಿಷೇಧಿತ ಖಲಿಸ್ತಾನಿ ಸಂಘಟನೆ “ಸಿಖ್ಸ್ ಫಾರ್ ಜಸ್ಟೀಸ್” (SFJ) ನ ಜನರಲ್ ಕೌನ್ಸೆಲ್ ಆಗಿರುವ ಪನ್ನುನ್, ಆಗಸ್ಟ್ 10 ರಂದು ಪಾಕಿಸ್ತಾನದ ಲಾಹೋರ್ ಪ್ರೆಸ್ ಕ್ಲಬ್ನಲ್ಲಿ ನಡೆದ “ಮೀಟ್ ದಿ ಪ್ರೆಸ್” ಕಾರ್ಯಕ್ರಮದ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದ. ವಾಷಿಂಗ್ಟನ್ನಿಂದ ವೀಡಿಯೊ ಭಾಷಣದಲ್ಲಿ, ದೆಹಲಿಯ ಕೆಂಪು ಕೋಟೆಯಲ್ಲಿ ಮೋದಿ ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯುವ “ಸಿಖ್ ಸೈನಿಕರಿಗೆ” ₹11 ಕೋಟಿ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದ್ದ.
ಈ ಕಾರ್ಯಕ್ರಮದಲ್ಲಿ, ಪನ್ನುನ್ ಪಂಜಾಬ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶವನ್ನು ಒಳಗೊಂಡಿರುವ ಹೊಸ ಖಲಿಸ್ತಾನದ ನಕ್ಷೆಯನ್ನು ಅನಾವರಣಗೊಳಿಸಿದ್ದ ಮತ್ತು SFJ ಭಾರತದ ವಿರುದ್ಧ ಹೋರಾಡಲು “ಶಹೀದ್ ಜಾಥಾ”ವನ್ನು ರಚಿಸಿದೆ ಎಂದು ಹೇಳಿಕೊಂಡಿದ್ದ.








