ಬೆಂಗಳೂರು : ಹೊಸ `BPL’ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಪರಿಷ್ಕರಣೆ ಬಳಿಕ ಹೊಸ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ಕೆ. ಮತ್ತು ಡಾ. ಯತೀಂದ್ರ ಎಸ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ತಕ್ಷಣ ಅರ್ಹ ಫಲಾನುಭವಿಗಳಿಗೆ ಹೊಸ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ವಿತರಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಕಳೆದ ಸರ್ಕಾರಗಳಿಂದ ಬಾಕಿ ಉಳಿದ ಅರ್ಜಿಗಳನ್ನು ಹಂತ ಹಂತವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಶೇ.75 ರಿಂದ 80ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ – ಅರ್ಹರಿಗೇ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯವನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.