ನವದೆಹಲಿ: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಗುರುವಾರ ಏಮ್ಸ್ ಪಾಟ್ನಾದ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳನ್ನ ಬಂಧಿಸಿದೆ. ನಾಲ್ವರಲ್ಲಿ ಮೂವರನ್ನ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಎಂದು ಗುರುತಿಸಲಾಗಿದೆ. ನಾಲ್ಕನೇ ಆರೋಪಿ ಕರಣ್ ಜೈನ್ ಪ್ರೀಮಿಯರ್ ಇನ್ಸ್ಟಿಟ್ಯೂಟ್ನಲ್ಲಿ ಮೊದಲ ವರ್ಷದ ವಿದ್ಯಾರ್ಥಿ.
ಈ ಗುಂಪನ್ನು ಬುಧವಾರ ಅವರ ಹಾಸ್ಟೆಲ್ನಿಂದ ವಶಕ್ಕೆ ತೆಗೆದುಕೊಂಡಿದ್ದು, ಅವರ ಕೊಠಡಿಗಳಿಗೆ ಬೀಗ ಹಾಕಲಾಯಿತು. ಅದ್ರಂತೆ, ಏಮ್ಸ್ ಪಾಟ್ನಾ ನಿರ್ದೇಶಕ ಜಿ.ಕೆ.ಪಾಲ್ ಈ ಬೆಳವಣಿಗೆಯನ್ನ ದೃಢಪಡಿಸಿದ್ದಾರೆ.
“ಸಿಬಿಐ ನಾಲ್ವರು ವಿದ್ಯಾರ್ಥಿಗಳನ್ನ ಕರೆದೊಯ್ದಿದೆ. ಚಂದನ್ ಸಿಂಗ್, ರಾಹುಲ್ ಅನಂತ್ ಮತ್ತು ಕುಮಾರ್ ಶಾನು ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದು, ಕರಣ್ ಜೈನ್ ಎರಡನೇ ವರ್ಷದ ವಿದ್ಯಾರ್ಥಿ” ಎಂದು ಏಮ್ಸ್ ಪಾಟ್ನಾ ನಿರ್ದೇಶಕ ಜಿ.ಕೆ.ಪಾಲ್ ತಿಳಿಸಿದ್ದಾರೆ.