ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಗಣೇಶೋತ್ಸವದ ಮೆರವಣಿಗೆ ವೇಳೆ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಮಂಡ್ಯದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಎರಡೂ ಕೋಮಿನ 55 ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ.
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 11 ರಂದು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳು ಸೆ.12 ರಿಂದ ಮಂಡ್ಯ ಕಾರಾಗೃಹದಲ್ಲಿದ್ದರು. ಇಂದು ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಗಳು ತಲಾ ಒಂದು ಲಕ್ಷ ಮೌಲ್ಯದ ಬಾಂಡ್, ಪ್ರತೀ ಭಾನುವಾರ ಠಾಣೆಗೆ ತೆರಳಿ ಸಹಿ ಮಾಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಅಪರಾಧಿ ಕೃತ್ಯದಲ್ಲಿ ಭಾಗಿಯಾಗದಂತೆ ಷರತ್ತು ವಿಧಿಸಲಾಗಿದೆ. ನಾಳೆ ನಾಡಿದ್ದು ರಜೆ ಹಿನ್ನೆಲೆ ಸೋಮವಾರ ಜೈಲಿನಿಂದ ಬಿಡುಗಡೆ ಸಾಧ್ಯತೆ ಇದೆ.