ಬೆಂಗಳೂರು :ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿದ್ದರು. ಕನ್ನಡ ಹುಟ್ಟಿದ್ದು ತಮಿಳುನಿಂದ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು. ಇದೀಗ ನಟ ಕಮಲ್ ಹಾಸನ್ ಅವರು ಫಿಲ್ಮ್ ಚೇಂಬರ್ ಗೆ ಪತ್ರ ಬರೆದಿದ್ದಾರೆ.
ನಟ ಕಮಲ್ ಹಾಸನ್ ಬರೆದ ಪತ್ರದಲ್ಲಿ ಏನಿದೆ?
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ನೋವುಂಟು ಮಾಡಿದೆ. ಕನ್ನಡ ನಾನು ಹಿಂದಿನಿಂದಲೂ ಮೆಚ್ಚುವ ಹೆಮ್ಮೆ ಸಾಹಿತ್ಯ. ಕನ್ನಡ ಭಾಷೆ ಕುಗ್ಗಿಸೋಕೆ ನಾನು ಹೇಳಿರೋದು ಅಲ್ಲ. ಕನ್ನಡಿಗರು ನನಗೆ ನೀಡಿದ ಪ್ರೀತಿ, ವಾತ್ಸಲ್ಯವನ್ನು ನಾನು ಪಾಲಿಸಿದ್ದೇನೆ. ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು ಆಗಿದೆ ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷ್ಮಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಸಿನಿಮಾ ಜನರ ನಡುವೆ ಸೇತುವೆಯಾಗಿ ಇರಬೇಕು, ಜನರ ಬೇರ್ಪಡಿಸುವ ಗೋಡೆ ಆಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ದ್ವೇಷಕ್ಕೆ ಅವಕಾಶ ನೀಡಿಲ್ಲ ಮತ್ತು ಎಂದಿಗೂ ನೀಡಲು ಬಯಸುವುದಿಲ್ಲ. ನನ್ನ ಮಾತುಗಳ ಉದ್ದೇಶವನ್ನು ಗ್ರಹಿಸಿ, ಕರ್ನಾಟಕದ ಬಗ್ಗೆ, ಅದರ ಜನರ ಬಗ್ಗೆ ಮತ್ತು ಅವರ ಭಾಷೆಯ ಬಗ್ಗೆ ನನಗಿರುವ ನಿರಂತರ ಪ್ರೀತಿಯನ್ನು ಗುರುತಿಸಲಾಗುವುದು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಮತ್ತೆ ಎತ್ತಿಹಿಡಿಯಲು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ ಎಂದು ಹೇಳಿದ್ದಾರೆ.
ಥಗ್ ಲೈಫ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ನಟ ಕಮಲ್ ಹಾಸನ್, ಕನ್ನಡದ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ನಟ ಶಿವರಾಜ್ ಕುಮಾರ್ ಎದುರಲ್ಲೇ ಕಮಲ್ ಹಾಸನ್, ಕನ್ನಡದ ಬಗ್ಗೆ ವಿವಾದಾತ್ಮಾ ಹೇಳಿಕೆ ನೀಡಿದ್ದು, ಸಾಮಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ಕಮಲ್ ಹಾಸನ್ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು. ಕನ್ನಡ ಹುಟ್ಟಿದ್ದು, ನಮ್ಮ ತಮಿಳಿನಿಂದ ಎಂದು ಹೇಳಿದ್ದಾರೆ.
ನಟ ಕಮಲ್ ಹಾಸನ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು. ಕನ್ನಡ ತಮಿಳಿನಿಂದ ಬಂದಿದ್ದಲ್ಲ ಎಂದು ಗುಡುಗಿದ್ದಾರೆ. ಕಮಲ್ ಹೇಳಿಕೆ ತಮಿಳುಗರ ಶ್ರೇಷ್ಠತೆಯ ವ್ಯಸನ ಎಂದು ಕನ್ನಡಿಗರು ಕಿಡಿಕಾರಿದ್ದರು.