ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕನ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಚಾಲಕ ಶಿವ ಪ್ರಸಾದ್ ಹಿಟ್ & ರನ್ ಕೇಸ್ ದಾಖಲಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಕ್ ಚಾಲಕ ತಮ್ಮನ್ನು ಓವರ್ ಟೇಕ್ ಮಾಡುವ ಪ್ರಯತ್ನದಲ್ಲಿ ಕಾರಿಗೆ ಗುದ್ದಿದ ಪರಿಣಾಮ ಈ ಅಪಘಾಯವಾಗಿದೆ ಎಂದು ಕಾರಿನ ಚಾಲಕ ಜಿ ಶಿವಪ್ರಸಾದ್ ಅವರು ದೂರು ನೀಡಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.‘ನಾನು ಸಚಿವರ ಸರ್ಕಾರಿ ಕಾರು ಚಲಾಯಿಸುತ್ತಿದ್ದೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದೆವು. ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ 48ರ ಮೇಲಿದ್ದೆವು. ನಮ್ಮ ಮುಂದೆ ಕಂಟೇನರ್ ಟ್ರಕ್ ಹೋಗುತ್ತಿತ್ತು. ಅದರ ಚಾಲಕ ಯಾವುದೇ ಮುನ್ಸೂಚನೆ ಕೊಡದೆ ಎಡಬದಿಗೆ ಬಂದನು. ಕಾರನ್ನು ಎಡಬದಿಗೆ ತೆಗೆದುಕೊಂಡರೂ ಅದರ ಬಲಬದಿಗೆ ಟ್ರಕ್ ತಾಗಿದೆ. ಕಾರು ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದೆ’ ಎಂದು ದೂರಿನಲ್ಲಿ ಕಾರು ಚಾಲಕ ಶಿವಪ್ರಸಾದ್ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿದ್ದು, ಈ ಒಂದು ಅಪಘಾತದಲ್ಲಿ ಅವರ ಸಹೋದರ ಚೆನ್ನರಾಜ ಹಟ್ಟಿಹೊಳಿ ಪ್ರಣಾಪಾಯದಿಂದ ಪಾರಾಗಿದ್ದಾರೆ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ ಪಡೆದುಕೊಂಡಿದ್ದಾರೆ.
ಹೌದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಕಾರು ಅಂಬಡಗಟ್ಟಿ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಹೆಬ್ಬಾಳ್ಕರ್ ಹಾಗೂ, ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದ ವೇಳೆ ಕಾರು ಮರಕ್ಕೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ರವಿ ಪಟೀಲ್ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಕಿತ್ಸೆ ನೀಡುತ್ತಿದ್ದಾರೆ.ಆಸ್ಪತ್ರೆಗೆ ಬೆಳಗಾವಿ ಎಸ್ ಪಿ ಆಗಮಿಸಿದ್ದು, ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹೆಬ್ಬಾಳ್ಕರ್ ತಾಯಿ ಹಾಗೂ ಸೋದರಿ ಕೂಡ ಆಸ್ಪತ್ರೆಗೆ ಆಗಮಿಸಿದ್ದು, ಆರೋಗ್ಯ ವಿಚಾರಿಸಿದ್ದಾರೆ.