ಬೆಂಗಳೂರು : ಇಂದು ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಸೆಣಸಾಡಲಿದ್ದು, ಆರ್ ಸಿಬಿ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಹಾರೈಸಿದ್ದಾರೆ.
ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು. ಆರ್‌ಸಿಬಿ ತಂಡದ ಸೋಲು – ಗೆಲುವು, ಏಳು – ಬೀಳುಗಳಲ್ಲಿ ಸದಾ ಜೊತೆ ನಿಂತು, ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ – ಸ್ಪೂರ್ತಿ ನೀಡುತ್ತಿರುವ ಕೋಟ್ಯಂತರ ಅಭಿಮಾನಿಗಳಿಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎನ್ನುವುದು ನನ್ನ ಅಂತರಾಳದ ಬಯಕೆ.
“ತಾಳ್ಮೆಯ ಫಲ ಸಿಹಿಯಾಗಿರುತ್ತದೆಯಂತೆ”, ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್‌ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.