ಮುಂಬೈ: ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ 56 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಶಾಂತ್ ನಡೆಸುತ್ತಿದ್ದ ಮೂರು ಡ್ರಗ್ಸ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ 17 ಕೆಜಿ ದ್ರವ ಮೆಫೆಡ್ರೋನ್, 4.10 ಕೆಜಿ ಘನ ಮೆಫೆಡ್ರೋನ್ ವಶಕ್ಕೆ ಪಡೆಯಲಾಗಿದೆ. ದಂಧೆ ನಡೆಸುತ್ತಿದ್ದ ಪ್ರಶಾಂತ್ ಪಾಟೀಲ್ ಮತ್ತು ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖನ್ ರಾಮಲಾಲ್ ಬಿಷ್ಣೋಯಿನನ್ನು ಬಂಧಿಸಲಾಗಿದೆ.
ಡಿಸೆಂಬರ್ 21ರಂದು ಮಹಾರಾಷ್ಟ್ರ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆ(ANTF) ಕೊಂಕಣ ವಿಭಾಗದ ಅಧಿಕಾರಿಗಳು ಮುಂಬೈನಲ್ಲಿ ದಾಳಿ ನಡೆಸಿ 1.5 ಕೋಟಿ ರೂಪಾಯಿ ಮೌಲ್ಯದ 1.5 ಕೆಜಿ ಮಾದಕ ದ್ರವ್ಯ ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಅಬ್ದುಲ್ ಖಾದಿರ್ ಶೇಖ್ ಎಂಬುವನನ್ನು ಬಂಧಿಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ನನ್ನ ಬಂಧಿಸಲಾಗಿದೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬೆಂಗಳೂರಿನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದ ಮಾಹಿತಿ ಬಹಿರಂಗಪಡಿಸಿದ್ದಾನೆ.








